ಬೆಳಗಾವಿ: ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ನಿಯಮಾವಳಿ ಪ್ರಕಾರ ಪ್ರತಿಯೊಂದು ಸ್ಥಳದಲ್ಲಿ ಆಂತರಿಕ ದೂರು ನಿರ್ವಹಣಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಂತರಿಕ ದೂರು ನಿರ್ವಹಣಾ ಸಮಿತಿ ರಚಿಸಬೇಕು. ಮೊದಲು ಸಮಿತಿಗೆ ದೂರು ಸಲ್ಲಿಸಬೇಕು. ಅಲ್ಲಿ ಬಗೆಹರಿಯದಿದ್ದರೆ ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಲೈಂಗಿಕ ಕಿರುಕುಳ ನಡೆದ ಸಂದರ್ಭದಲ್ಲಿ ಮಹಿಳೆಯರು ಏನು ಮಾಡಬೇಕು ಎಂಬುದರ ಕುರಿತು ತಿಳಿವಳಿಕೆ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಬೇಕು. ಇತ್ತೀಚಿನ ಮಕ್ಕಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಕಡೆಗಳಲ್ಲಿ ಆತ್ಮಹತ್ಯೆ ತಡೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಜಾಗೃತಿ ಮೂಡಿಸಲು ಸೂಚನೆ: ಮಹಿಳಾ ಕಾರ್ಮಿಕರಿಗೆ ಇರುವ ಹಕ್ಕುಗಳ ಕುರಿತು ಬಹಳಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಆಂತರಿಕ ದೂರು ನಿರ್ವಹಣಾ ಸಮಿತಿ ಸೇರಿದಂತೆ ವಿವಿಧ ಬಗೆಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಾಡಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರಿಗೆ ಉಚಿತ ಕಾನೂನು ನೆರವು ಒದಗಿಸಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಮಹಿಳೆಯರಿಗೆ ಮಾಹಿತಿ ನೀಡಬೇಕು ಎಂದರು.
ಅತ್ಯಾಚಾರಕ್ಕೆ ಒಳಗಾದ ಹಾಗೂ ಲೈಂಗಿಕ ದೌರ್ಜನ್ಯದಿಂದ ನೊಂದ ಬಾಲಕಿಯರು ಅಥವಾ ಮಕ್ಕಳಿಗೆ ಸರ್ಕಾರದ ನಿಯಮಾವಳಿ ಪ್ರಕಾರ ನೀಡಬೇಕಾದ ಪರಿಹಾರ ಮೊತ್ತವನ್ನು ತಕ್ಷಣವೇ ನೀಡಬೇಕು. ಉಳಿದ ಮೊತ್ತವನ್ನು ಪ್ರಕರಣ ಇತ್ಯರ್ಥಗೊಂಡ ನಂತರ ಒದಗಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ಮಹಿಳಾ ರೋಗಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಮಹಿಳಾ ವಾರ್ಡ್ಗಳು ಮತ್ತು ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಹೊರಗೆ ಬಂದು ಕೆಲಸ ಮಾಡುವ ಮಹಿಳೆಯರಿಗೆ ಅಗತ್ಯ ಸುರಕ್ಷತೆ ಸೇರಿದಂತೆ ಎಲ್ಲ ಬಗೆಯ ನೆರವು ಒದಗಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ನಿರ್ದೇಶನವನ್ನು ನೀಡಿದರು.
ಓದಿ: ಮನೆ ಸುತ್ತ ಕಂದಕ ತೋಡಿ ಮಾಲೀಕನಿಂದ ಕಿರುಕುಳ: ನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕಾರ್ಮಿಕ