ಚಿಕ್ಕೋಡಿ (ಬೆಳಗಾವಿ): ಗ್ರಾಮದ ಪಕ್ಕದಲ್ಲಿ ಮದ್ಯದ ಅಂಗಡಿ ಇರುವುದರಿಂದ ಗ್ರಾಮದ ಮಹಿಳೆಯರಿಗೆ ಮತ್ತು ಶಾಲಾ ಹೆಣ್ಣು ಮಕ್ಕಳಿಗೆ ಮದ್ಯ ಪ್ರಿಯರು ತೊಂದರೆ ಕೊಡುತ್ತಿದ್ದಾರೆ ಇಲ್ಲಿಂದ ಅಂಗಡಿಯನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೈನ್ಸ್ ಸ್ಥಳಾಂತರ ಮಾಡುವಂತೆ ಗ್ರಾಮದ ಮಹಿಳೆಯರು ಪಟ್ಟು ಹಿಡಿದು ಮದ್ಯ ಮಾರಾಟ ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂಗಡಿಗೆ ಬೀಗ ಹಾಕಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ಇದೆ ಸಂದರ್ಭದಲ್ಲಿ ನಂದಿಕುರಳಿ ಗ್ರಾಮಸ್ಥರಾದ ದುಂಡವ್ವ ಸನದಿ ಮಾತನಾಡಿ, "ಈ ಮದ್ಯದ ಅಂಗಡಿಯಿಂದ ಗ್ರಾಮದಲ್ಲಿ ನೆಮ್ಮದಿ ಇಲ್ಲದಂತಾಗಿದೆ, ನಮ್ಮ ಹಿರಿಯರೆಲ್ಲರೂ ಮದ್ಯ ಸೇವಿಸಿ ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಕೆಲವು ಕಿಡಿಗೇಡಿಗಳು ಮದ್ಯ ಸೇವನೆ ಮಾಡಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳನ್ನು ಚುಡಾಯಿಸುತ್ತಿದ್ದಾರೆ. ಗ್ರಾಮದ ಮಹಿಳೆಯರು ಬಸ್ ನಿಲ್ದಾಣದಲ್ಲಿ ನಿಂತರೆ ಎಲ್ಲಿಗೆ ಹೊಟ್ಟಿದ್ದೀರಿ, ಯಾಕೆ ಹೊರಟ್ಟಿದ್ದಿರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ" ಎಂದು ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಹೇಳಿಕೊಂಡರು.
"ಬಸ್ ನಿಲ್ದಾಣ ಪಕ್ಕದಲ್ಲಿರುವ ಈ ಮದ್ಯದ ಅಂಗಡಿಯನ್ನು ಸ್ಥಳಾಂತರ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಎರಡು ವರ್ಷದ ಹಿಂದೆಯೇ ಮನವಿ ಮಾಡಲಾಗಿತ್ತು. ಸ್ಥಳಾಂತರಕ್ಕೆ ಅಧಿಕಾರಿಗಳು ಮೂರು ತಿಂಗಳು ಗಡುವು ನೀಡಿದ್ದರು. ಆದರೆ ಇದುವರೆಗೆ ಅಂಗಡಿ ಬೇರೆ ಕಡೆ ಹೋಗಿಲ್ಲ ಗ್ರಾಮದಿಂದ 3 ಕಿಲೋಮೀಟರ್ ಅಂತರ ಇದ್ದರೆ ನಮಗೆ ಒಳ್ಳೆಯದು. ಈ ಮದ್ಯದ ಅಂಗಡಿಯಿಂದ ನಮಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಆದಷ್ಟು ಬೇಗನೆ ಅಂಗಡಿಯನ್ನು ಸ್ಥಳಾಂತರ ಮಾಡಿ'' ಎಂದು ಸರ್ಕಾರಕ್ಕೆ ಹಾಗೂ ಬೆಳಗಾವಿಯ ಅಬಕಾರಿ ಹಿರಿಯ ಅಧಿಕಾರಿಗಳಿಗೆ ಮಾಧ್ಯಮಗಳ ಮುಖಾಂತರ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಮದ್ಯದ ಅಂಗಡಿ ಇರುವುದರಿಂದ ಯುವಕರು ಕೂಡ ಮಧ್ಯದ ವ್ಯಸನಿಗಳು ಆಗುತ್ತಿದ್ದಾರೆ. ಗ್ರಾಮದ ಪುರುಷರು ಯಾರೂ ದುಡಿಯೋದಕ್ಕೆ ಹೋಗುತ್ತಿಲ್ಲ. ಅಲ್ಪ ಸ್ವಲ್ಪ ಹಣ ಉಳಿತಾಯವಾದರೆ ಮದ್ಯ ಸೇವನೆ ಮಾಡಿ ಅಲ್ಲೇ ಕಾಲ ಕಳೆಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಈ ಕುರಿತು ಪ್ರತಿಭಟನೆ ನಡೆಸಲಾಗಿತ್ತು. ಅಂದು 3 ತಿಂಗಳಲ್ಲಿ ಸ್ಥಳಾಂತರ ಮಾಡುವುದಾಗಿ ಹೇಳಿದ್ದರು. ಆದ್ರೆ ಈವರೆಗೂ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಆದಷ್ಟು ಬೇಗನೆ ಈ ಅಂಗಡಿಯನ್ನು ಸ್ಥಳಾಂತರ ಮಾಡಿ, ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು. ಏನಾದ್ರೂ ಅನಾಹುತವಾದರೆ ಅಧಿಕಾರಿಗಳು ಹೊಣೆಗಾರರು ಎಂದು ಮಹಿಳೆಯರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕಾರವಾರ : ಶಿಕ್ಷಕಿ ವರ್ಗಾವಣೆ ಖಂಡಿಸಿ ಶಾಲೆಗೆ ಬೀಗ.. ಮಕ್ಕಳು, ಗ್ರಾಮಸ್ಥರಿಂದ ಪ್ರತಿಭಟನೆ