ಚಿಕ್ಕೋಡಿ : ವಿವಾಹಿತ ಮಹಿಳೆಯೊಬ್ಬಳು ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದು, ಅದು ಸರಿಯಲ್ಲವೆಂದು ತಿಳುವಳಿಕೆ ಹೇಳಿದ ಮಹಿಳೆಯ ಜೊತೆಗೆ ಸ್ವಂತ ಮಗನನ್ನೇ ಬಾವಿಗೆ ತಳ್ಳಿ ಕೊಲೆಗೈದ ಆರೋಪಿಗಳು ಹುಕ್ಕೇರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿ ಸುರೇಶ ಕರಿಗಾರ ನೀಡಿದ ದೂರಿನ ಆಧಾರದ ಮೇರೆಗೆ ಹುಕ್ಕೇರಿ ಪೊಲೀಸರು ಪ್ರಕರಣ ತನಿಖೆ ನಡೆಸಿದ್ದರು. ಇಬ್ಬರನ್ನು ಹತ್ಯೆ ಮಾಡಿ ಅಮಾಯಕರಂತೆ ತಿರುಗಾಡುತ್ತಿದ್ದ ಸುಧಾ ಕರಿಗಾರ ಮತ್ತು ರಾಮ ಬಸ್ತವಾಡೆ ಎಂಬ ಆರೋಪಿಗಳು ಇದೀಗ ಬಂಧಿತರಾಗಿದ್ದಾರೆ.
ಆರೋಪಿ ಸುಧಾ ಕರಿಗಾರ, ಬಸ್ತವಾಡೆ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಅನೈತಿಕ ಸಂಬಂಧದ ಬಗ್ಗೆ ತಿಳಿದಿದ್ದ ಮಗ ಮತ್ತು ಗೆಳತಿ ಭಾಗ್ಯಶ್ರೀಯನ್ನು ಆರೋಪಿಗಳು ಅಮಾನುಷವಾಗಿ ಕೊಲೆ ಮಾಡಿದ್ದರು. ಸ್ವಂತ ಮಗನನ್ನು ಬಾವಿಗೆ ದೂಡಿ ಮತ್ತು ಗೆಳತಿಯ ಮೇಲೆ ಸೀಮೆ ಎಣ್ಣೆ ಸುರಿದು ಈ ಕೃತ್ಯ ಎಸಗಿದ್ದರು. ಈ ಬಗ್ಗೆ ಸುರೇಶ ಕರಿಗಾರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣದ ಬೆನ್ನು ಹತ್ತಿದ್ದ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಹುಕ್ಕೇರಿ ಪಿಎಸ್‌ಐ ನೇತೃತ್ವದ ತಂಡ ಪ್ರಕರಣ ಬೇಧಿಸುವಲ್ಲಿ ಇದೀಗ ಯಶಸ್ವಿಯಾಗಿದೆ.