ಬೆಳಗಾವಿ: ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಯುವಕ ಬಳಿಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎನ್ನಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಬೆಳಕಿಗೆ ಬಂದಿದೆ.
ಗೋಕಾಕ್ ನಗರದ ಆದರ್ಶ ಮಾಲದಿನ್ನಿ ವಿರುದ್ಧ ಪ್ರೀತಿಸಿ, ಮದುವೆಯಾಗುವುದಾಗಿ ವಂಚಿಸಿದ ಆರೋಪ ಕೇಳಿ ಬಂದಿದೆ. ಗೋಕಾಕ್‌ನಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿರುವ ಕಟ್ಟಡವನ್ನು ಆರೋಪಿಯ ತಂದೆ ಬಾಡಿಗೆಗೆ ನೀಡಿದ್ದ ಎಂದು ತಿಳಿದುಬಂದಿದೆ.
2016ರ ಡಿಸೆಂಬರ್ 5 ರಂದು ಯುವತಿಯನ್ನು ಮನೆಗೆ ಕರೆದಿರುವ ಆದರ್ಶ, ಬಳಿಕ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ದುಷ್ಕೃತ್ಯದ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ಈ ವಿಷಯ ಬಹಿರಂಗಪಡಿಸಿದರೆ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಬಳಿಕ ಯುವತಿ ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿದ್ದಂತೆ ಮದುವೆಯಾಗುವುದಾಗಿ ನಂಬಿಸಿದ್ದಾನಂತೆ.
ಈ ವಿಷಯವನ್ನು ಯುವಕ ಆದರ್ಶನ ತಂದೆ-ತಾಯಿ ಗಮನಕ್ಕೂ ತಂದಿದ್ದಾಳೆ. ಆಗ ಯುವತಿಗೆ ಹಣದ ಆಮಿಷ ತೋರಿಸಿರುವ ಯುವಕನ ಪೋಷಕರು, ಬಳಿಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಯುವತಿ ಆರೋಪಿಸಿದ್ದಾಳೆ.
ವಿಪರ್ಯಾಸವೆಂದ್ರೆ, ನಂಬಿಸಿ ಅತ್ಯಾಚಾರ ಎಸಗಿ ಮೋಸ ಮಾಡಿರುವ ಆದರ್ಶ, ನಾಳೆ ಬೇರೆ ಯುವತಿ ಜೊತೆಗೆ ಮದುವೆಯಾಗುತ್ತಿದ್ದು ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ವಕೀಲ ಎಂ.ಟಿ.ಪಾಟೀಲ್ ಜೊತೆ ನೊಂದ ಯುವತಿ ಬೆಳಗಾವಿ ಎಸ್.ಪಿ ಮೊರೆ ಹೋಗಿದ್ದಾಳೆ.