ಬೆಳಗಾವಿ: ಮಹಿಳೆಯು ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಗರದ ಹೊರವಲಯದ ಹಿಂಡಲಗಾ ಗಣಪತಿ ಮಂದಿರ ಬಳಿ ನಡೆದಿದೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸಹ್ಯಾದ್ರಿ ನಗರದ ಕೃಷಾ ಮನೀಷ್ ಕೇಶವಾಣಿ (36) ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ. ಇಂದು ಸಂಜೆ ಗಣಪತಿ ಮಂದಿರಕ್ಕೆ ಬಂದಿದ್ದ ಕೃಷಾ ಬಳಿಕ ದೇಗುಲ ಎದುರಿರುವ ಕೆರೆಯತ್ತ ಹೋಗಿದ್ದಾರೆ. ಆಗ ಮಕ್ಕಳ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ಕ್ಯಾಂಪ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ನಗ್ನ ಫೋಟೋ ಪಡೆದು ಯುವಕನಿಂದ ವೈರಲ್ ಬೆದರಿಕೆ
ಸ್ಥಳಕ್ಕೆ ಆಗಮಿಸಿದ ಕ್ಯಾಂಪ್ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಎಸ್.ಡಿಆರ್.ಎಫ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಶೋಧ ಕಾರ್ಯ ನಡೆಸಿದ ಸಿಬ್ಬಂದಿ ಕೃಷಾ ಮನೀಷ್ ಕೇಶವಾಣಿ (36) ಹಾಗೂ ಪುತ್ರ ಭಾವಿರಾ ಮನೀಷ್ ಕೇಶವಾಣಿ (4) ಪತ್ತೆ ಹಚ್ಚಿದ್ದಾರೆ.
ಕತ್ತಲಾದ ಕಾರಣ ಇನ್ನೋರ್ವ ಪುತ್ರ ವಿರೇನ್ ಕೇಶವಾಣಿ ಮೃತದೇಹ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ನಾಳೆ ಬೆಳಗ್ಗೆ ಮತ್ತೆ ಮುಂದುವರೆಯಲಿದೆ. ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.