ಬೆಳಗಾವಿ : ಕೌಟುಂಬಿಕ ಕಲಹಕ್ಕೆ ಬೇಸತ್ತ ಮಹಿಳೆಯೊಬ್ಬರು 11 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಮಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಮಣ್ಣಿಕೇರಿ ಗ್ರಾಮದ 21 ವರ್ಷದ ಗೃಹಿಣಿ ತನ್ನ 11 ತಿಂಗಳ ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದಷ್ಟೇ ಮಣ್ಣಿಕೇರಿ ಗ್ರಾಮದ ಮೋಹನ್ ಎಂಬುವರ ಜತೆ ವಿವಾಹವಾಗಿತ್ತು.
ಆದರೆ, ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ವಿರಸ ಶುರುವಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳ ನಡೆದಿದೆ ಎನ್ನಲಾಗಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತ ಮಹಿಳೆ ಮನನೊಂದು ತನ್ನ 11 ತಿಂಗಳ ಪುಟ್ಟ ಮಗುವಿನೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಎಸಿಪಿ ಗಣಪತಿ ಗುಡಾಜೀ, ಕಾಕತಿ ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.