ಬೆಳಗಾವಿ: ಮಹಾಮಾರಿ ಕೊರೊನಾ ಇಳಿಮುಖವಾಗಿರುವ ಕಾರಣಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯ ಜನರೀಗ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಮಹಿಳೆಯೊಬ್ಬರು ನಿನ್ನೆಯಷ್ಟೇ ಲಂಡನ್ನಿಂದ ಬೆಳಗಾವಿಗೆ ಮರಳಿರುವುದು ಜಿಲ್ಲೆಯ ಜನರಲ್ಲಿ ಭೀತಿ ಹುಟ್ಟಿಸಿದೆ. ಲಂಡನ್ನಿಂದ ಆಗಮಿಸಿ ಬೆಳಗಾವಿಯ ಖಡೇಬಜಾರ್ ಪ್ರದೇಶದಲ್ಲಿನ ಮನೆಯಲ್ಲಿ ವಾಸವಿದ್ದ ಮಹಿಳೆಗೆ ಇಂದು ಕೋವಿಡ್ ಟೆಸ್ಟ್ ಮಾಡಲಾಗಿದೆ. ಲಂಡನ್ನಿಂದ ಬೆಂಗಳೂರಿಗೆ ಬಂದಿದ್ದ ಮೂವತ್ತೈದು ವರ್ಷದ ಮಹಿಳೆ ನಿನ್ನೆಯಷ್ಟೇ ಬೆಳಗಾವಿ ನಗರಕ್ಕೆ ಆಗಮಿಸಿದ್ದಾರೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಇಂದು ಮಹಿಳೆಯ ಮನೆಗೆ ಭೇಟಿ ನೀಡಿದ ಆರೋಗ್ಯ ಸಿಬ್ಬಂದಿ, ಆರೋಗ್ಯ ತಪಾಸಣೆ ನಡೆಸಿದ್ದಾರೆ. ಬಳಿಕ ಕೋವಿಡ್ ಟೆಸ್ಟ್ ಕೂಡ ಮಾಡಲಾಗಿದೆ.
ಮಹಿಳೆ ಸೇರಿದಂತೆ ಆಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮೇಲೆ ಅಧಿಕಾರಿಗಳು ತೀವ್ರ ನಿಗಾ ಇಟ್ಟಿದ್ದಾರೆ. ಮಹಿಳೆಯ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ. ವಿದೇಶದಿಂದ ಬಂದವರಿಗಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ತೀವ್ರ ಶೋಧ ನಡೆಸಿದೆ.