2023ರ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಗುರಿ: 15 ಮಂದಿ ವಿಶೇಷಚೇತನ ತಂಡದಿಂದ ಕಠಿಣ ತರಬೇತಿ - ವೀಲ್‌ಚೇರ್ ಬಾಸ್ಕೆಟ್‌ಬಾಲ್ ತಂಡ ತರಬೇತಿ
2023ರ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬೇಕೆಂಬ ಗುರಿ ಹೊಂದಿರುವ ಬೆಳಗಾವಿ ನಗರದ 15 ಜನ ವಿಶೇಷಚೇತರನ ತಂಡ ಕಠಿಣ ತರಬೇತಿ ಪಡೆಯುತ್ತಿದೆ. ಆದರೆ ಇವರಿಗೆ ಉತ್ತಮ ಗುಣಮಟ್ಟದ ಸೌಕರ್ಯಗಳು ಸಿಗುತ್ತಿಲ್ಲ.
ಬೆಳಗಾವಿ: ಹದಿನೈದು ಜನ ವಿಶೇಷಚೇತನರ ತಂಡವೊಂದು 2023ರ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬೇಕೆಂಬ ಗುರಿಯೊಂದಿಗೆ ಈಗಿನಿಂದಲೇ ಕಠಿಣ ತರಬೇತಿ ಪಡೆದುಕೊಳ್ಳುತ್ತಿದೆ. ಆದರೆ ಇವರಿಗೆ ತರಬೇತಿಗೆ ತಕ್ಕಂತೆ ಅಗತ್ಯವಿರುವ ಪ್ರೋತ್ಸಾಹ, ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿವೆ.
ನಗರದಲ್ಲಿ ವಾಸವಾಗಿರುವ ವಿಶೇಷಚೇತನ ತಂಡದ ಕೆಲವರು ಪೋಲಿಯೋ, ಅಪಘಾತ, ಅವಘಡ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸಿಲುಕಿ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಆದರೆ ಇವರೆಲ್ಲರೂ ರಾಜ್ಯ ಮತ್ತು ದೇಶದ ಪರವಾಗಿ ಆಡಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳಾಗಿದ್ದಾರೆ. ದೌರ್ಬಲ್ಯ ದೇಹದಲ್ಲಿದ್ದರೂ ಪರವಾಗಿಲ್ಲ, ಮನಸ್ಸಿನಲ್ಲಿರಬಾರದು ಎಂಬ ನಾಣ್ಣುಡಿಯಂತೆ ದೇಶಕ್ಕೆ ತಮ್ಮದೆ ಕೊಡುಗೆ ನೀಡಲು ಹೊರಟ್ಟಿದ್ದಾರೆ.
2023ರಲ್ಲಿ ನಡೆಯುವ ಪ್ಯಾರಾಲಿಂಪಿಕ್‌ನಲ್ಲಿ ವೀಲ್‌ಚೇರ್ ಬಾಸ್ಕೆಟ್‌ಬಾಲ್ ವಿಭಾಗದಲ್ಲಿ ಸ್ಪರ್ಧಿಸಿ ಭಾರತಕ್ಕೆ ಪದಕ ತಂದುಕೊಡಬೇಕೆಂಬ ಗುರಿಯನ್ನು ಇಟ್ಟುಕೊಂಡು ಈಗಿನಿಂದಲೇ ಕಠಿಣ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ತರಬೇತಿ ಪಡೆದುಕೊಳ್ಳುತ್ತಿರುವ ಎಲ್ಲಾ ವಿಶೇಷಚೇತನರು ನಿರುದ್ಯೋಗಿಗಳು. ಯಾರೊಬ್ಬರಿಗೂ ಉದ್ಯೋಗವಿಲ್ಲ. ಎಲ್ಲರೂ ಹಿಂದುಳಿದ ಮತ್ತು ಬಡತನ ಕುಟುಂಬಗಳಿಂದ ಬಂದಿದ್ದಾರೆ. ಇವರಿಗೆ ಗುಣಮಟ್ಟದ ತರಬೇತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ವಿಶ್ವಾಸ ಫೌಂಡೇಶನ್:
ವೀಲ್‌ಚೇರ್ ತರಬೇತಿ ಪಡೆಯುತ್ತಿರುವ ವಿಶೇಷಚೇತನ ಆಟಗಾರರು ತಮ್ಮ ಜೀವನ ನಿರ್ವಹಣೆಗೆ ಎಲ್ಲರೂ ಜೊತೆಗೂಡಿ ವಿಶ್ವಾಸ ಫೌಂಡೇಶನ್ ಸ್ಥಾಪಿಸಿಕೊಂಡಿದ್ದಾರೆ. ಫೌಂಡೇಶನ್‌ಗೆ ಸಣ್ಣಪುಟ್ಟ ದಾನಿಗಳು, ಸಂಘ-ಸಂಸ್ಥೆಗಳು ನೀಡುವ ಆರ್ಥಿಕ ಸಹಾಯವನ್ನೇ ನೆಚ್ಚಿಕೊಂಡಿರುವ ಇವರು ತರಬೇತಿಗೆ ಬೇಕಾದ ಮೂಲ ಸೌಕರ್ಯ ಪಡೆದುಕೊಳ್ಳುತ್ತಿದ್ದಾರೆ. ಹದಿನೈದು ಜನರ ಪೈಕಿ 11 ಜನರು ರಾಷ್ಟ್ರೀಯ ಮತ್ತು 4 ಜನರು ಅಂತಾರಾಷ್ಟ್ರೀಯ ಆಟಗಾರಿದ್ದಾರೆ. ಆದರೆ ಇವರ ಸಾಧನೆಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ದಾನಿಗಳ ಸಹಾಯದಿಂದ ಜೀವನ ನಿರ್ವಹಣೆ ಜೊತೆಗೆ ವೀಲ್‌ಚೇರ್ ಬಾಸ್ಕೆಟ್‌ಬಾಲ್ ತರಬೇತಿಗೆ ಬೇಕಾದ ವೀಲ್‌ಚೇರ್, ಬಾಸ್ಕೆಟ್‌ಬಾಲ್ ಸೇರಿದಂತೆ ಸ್ಪರ್ಧೆಗೆ ಹೋಗಿ ಬರುವ ಖರ್ಚು-ವೆಚ್ಚಗಳು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಆರ್ಥಿಕವಾಗಿ ಸಹಾಯ ಮಾಡದಿದ್ದರೂ ಪರವಾಗಿಲ್ಲ. ಸಾಮಾನ್ಯ ಕ್ರೀಡಾಪಟುಗಳಿಗೆ ನೀಡುವಂತಹ ಸೌಲಭ್ಯಗಳನ್ನು ಸರ್ಕಾರ ಒದಗಿಸುವ ಕಾರ್ಯ ಮಾಡಬೇಕು ಎಂಬುದು ಕ್ರೀಡಾಪಟುಗಳ ಆಶಯ.
ವೀಲ್‌ಚೇರ್ ಬಾಸ್ಕೆಟ್‌ಬಾಲ್ ವಿಭಾಗದಲ್ಲಿ ಕರ್ನಾಟಕದ ಮುಖ್ಯ ತಂಡ ಬೆಳಗಾವಿ:
ಕಳೆದ 2014ರಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ವೀಲ್‌ಚೇರ್ ಬಾಸ್ಕೆಟ್‌ಬಾಲ್ ತರಬೇತಿ ಪ್ರಾರಂಭಿಸಲಾಗಿದ್ದು, ಸದ್ಯ ಭಾರತೀಯ ವೀಲ್‌ಚೇರ್ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಜಿಲ್ಲೆಯ ಮಹಿಳೆಯರ ತಂಡ ಮೊದಲೆರಡು ಸ್ಥಾನದಲ್ಲಿದ್ದಾರೆ. 2018ರಲ್ಲಿ ಹೈದರಾಬಾದ್ ಮತ್ತು 2020ರಲ್ಲಿ ಪಂಜಾಬ್‌ನಲ್ಲಿ ನಡೆದ ಮಹಿಳೆಯರ ಬಾಸ್ಕೆಟ್‌ಬಾಲ್ ವೀಲ್‌ಚೇರ್ ಪಂದ್ಯದಲ್ಲಿ ಕರ್ನಾಟಕದ ತಂಡ ಮೂರನೇ ಸ್ಥಾನ ಪಡೆದುಕೊಂಡಿದೆ. 2020ರಲ್ಲಿ ಬೆಳಗಾವಿಯ ಮನೀಷಾ ಪಾಟೀಲ, ಜ್ಯೋತಿ ತೋರಲಕರ್, ಆರತಿ ಪವಾರ ಎಂಬುವವರು ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ವೀಲ್‌ಚೇರ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರರ್ದಶನ ನೀಡಿದ್ದರು. ಸದ್ಯ 2023ರಲ್ಲಿ ಪ್ಯಾರಾಲಿಂಪಿಕ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗಳಿಸಬೇಕು ಎಂಬ ಗುರಿಯನ್ನು ಹೊಂದಿದ್ದಾರೆ.
ಕ್ರೀಡಾಂಗಣದ ಸಮಸ್ಯೆ:
ವಿಶೇಷಚೇತನರ ತಂಡವೂ ಪ್ರತಿ ಶನಿವಾರ, ಭಾನುವಾರ ಸೇರಿದಂತೆ ಇತರ ದಿನಗಳಲ್ಲಿ ನಗರದ ಕೆಎಲ್‌ಇ ಕಾಲೇಜಿನ ಆವರಣದಲ್ಲಿರುವ ಜಿಲ್ಲಾ ಕ್ರಿಡಾಂಗಣದಲ್ಲಿ ತರಬೇತಿ ಪಡೆದುಕೊಳ್ಳುತ್ತಿದೆ. ಆದರೆ ಕ್ರೀಡಾಂಗಣ ಹಾಳಾಗಿದ್ದರಿಂದ ವೀಲ್‌ಚೇರ್‌ಗಳ ಚಕ್ರಗಳು ಪದೇ ಪದೇ ಹಾಳಾಗುತ್ತಿವೆ. ಇದರಿಂದ ವೀಲ್‌ಚೇರ್ ಚಕ್ರಗಳನ್ನು ತೆಗೆದುಕೊಳ್ಳಲು ಆರ್ಥಿಕ ತೊಂದರೆ ಉಂಟಾಗುತ್ತಿದೆ. ಬಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಿಸಲು ನಗರದಲ್ಲಿ ಜಾಗದ ಸಮಸ್ಯೆ ಇದ್ದು, ಸದ್ಯ ಈಗಿರುವ ಜಿಲ್ಲಾ ಕ್ರೀಡಾಂಗಣದಲ್ಲಿಯೇ ಆದಷ್ಟೂ ಬೇಗ ಸಿಂಥೆಟಿಕ್ ಹಾಕಬೇಕು. ಹದಿನೈದು ಜನ ಆಟಗಾರರಿಗೆ ಸದ್ಯ 8 ವೀಲ್‌ಚೇರ್‌ಗಳಿದ್ದು, ಎಲ್ಲರಿಗೂ ಗುಣಮಟ್ಟದ ವೀಲ್‌ಚೇರ್‌ಗಳನ್ನು ಕೊಡಿಸಬೇಕಿದೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಬಳಸಲಾಗುವ ವೀಲ್‌ಚೇರಗಳನ್ನು ಕೊಡಿಸಲು ಯಾರಾದರೂ ದಾನಿಗಳು ಮುಂದೆಬರಬೇಕಿದೆ.
ವಿಶೇಷಚೇತನ ಆಟಗಾರರಿಗೆ ಸರ್ಕಾರಿ ಕೆಲಸಗಳಿಗೆ ಮೀಸಲಾತಿ ನೀಡಿ:
ತರಬೇತಿ ಪಡೆಯುತ್ತಿರುವ ವಿಶೇಷಚೇತನರ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಕಾರಣ ಯಾರೊಬ್ಬರಿಗೂ ಉದ್ಯೋಗವಿಲ್ಲ. ಆದರೆ ಎಲ್ಲರೂ ಪದವಿ, ಸ್ನಾತಕೋತ್ತರ ಸೇರಿದಂತೆ ಇತರ ವಿಶ್ವವಿದ್ಯಾಲಯಗಳಲ್ಲಿ ಪದವಿಗಳನ್ನು ಪಡೆದುಕೊಡಿದ್ದಾರೆ. ಅವರ ಶಿಕ್ಷಣದ ಜೊತೆಗೆ ಸರ್ಕಾರಿ ಕೆಲಸಗಳಲ್ಲಿ ಪ್ಯಾರಾಲಿಂಪಿಕ್ ಆಟಗಾರರನ್ನು ಪರಿಗಣಿಸಬೇಕು. ಇದಲ್ಲದೆ ಜಿಲ್ಲಾಮಟ್ಟದಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವ ಸರ್ಕಾರಿ ನೌಕರಿಗೂ ಜಿಲ್ಲಾಡಳಿತ ಈ ಆಟಗಾರರನ್ನು ಪರಿಗಣಿಸಬೇಕು. ಇದರಿಂದ ಅವರಿಗೆ ಆರ್ಥಿಕವಾಗಿ ಸಹಾಯವಾಗಲಿದೆ.
ಭಾರತದಲ್ಲಿ ವಿದ್ಯಾಭ್ಯಾಸ, ಉದ್ಯೋಗ ಗಳಿಕೆಯ ಕಸರತ್ತಿನಲ್ಲಿ ಕ್ರೀಡೆಗೆ ಕೊನೆಯ ಸ್ಥಾನವಿದೆ ಎಂಬ ಮಾತಿದೆ. ಅದನ್ನು ತಪ್ಪಿಸಲು ಸರ್ಕಾರ ಇನ್ನಾದರೂ ವಿಶೇಷಚೇತನರಿಗೆ ವಿಶೇಷ ಸವಲತ್ತುಗಳನ್ನು ಕೊಟ್ಟು ಪ್ಯಾರಾಲಿಂಪಿಕ್ ಆಟಗಾರರಿಗೆ ಪ್ರತ್ಯೇಕ ಕ್ರೀಡಾವ್ಯವಸ್ಥೆ ಒದಗಿಸಬೇಕು ಎಂಬುವುದು ಆಟಗಾರರ ಆಗ್ರಹ.