ಬೆಳಗಾವಿ : ಗ್ವಾಲಿಯರ್ ಸಮೀಪ ಸಂಭವಿಸಿದ ವಾಯುಪಡೆಯ ಯುದ್ಧ ವಿಮಾನಗಳ ಪತನದಲ್ಲಿ ಹುತಾತ್ಮರಾದ ಪೈಲಟ್ ಮತ್ತು ವಿಂಗ್ ಕಮಾಂಡರ್ ಬೆಳಗಾವಿಯ ಗಣೇಶಪುರದ ಹನುಮಂತರಾವ್ ರೇವಣಸಿದ್ದಪ್ಪ ಸಾರಥಿ ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ನೆರವೇರಿತು. ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತರ ಅಂತಿಮ ವಿಧಿವಿಧಾನಗಳು ನೆರವೇರಿದವು. ವೀರ ಯೋಧ ಹನುಮಂತರಾವ್ ಸಾರಥಿ ಅವರು ಪಂಚಭೂತಗಳಲ್ಲಿ ಲೀನರಾದರು.
ಮೃತ ಯೋಧನ ಪಾರ್ಥಿವ ಶರೀರವನ್ನು ಸೇನೆಯ ವಿಶೇಷ ವಿಮಾನದ ಮೂಲಕ ಭಾನುವಾರ ಮಧ್ಯಾಹ್ನ 12.30 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಈ ವೇಳೆ ವಿಮಾನ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ವಿ.ದರ್ಶನ್ ಮತ್ತಿತರೆ ಗಣ್ಯರು ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದ್ದರು. ಬಳಿಕ ಸೇನಾ ವಾಹನದಲ್ಲಿ ಹುಟ್ಟೂರಿಗೆ ಪಾರ್ಥಿವ ಶರೀರ ತರಲಾಗಿತ್ತು.
ಬಳಿಕ ಗಣ್ಯರು ಸೇರಿದಂತೆ ಗ್ರಾಮಸ್ಥರು ವೀರ ಯೋಧನ ಅಂತಿಮ ದರ್ಶನ ಪಡೆದರು. ಬೆನಕನಹಳ್ಳಿ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕುರುಬ ಸಮಾಜದ ಧಾರ್ಮಿಕ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಯಿತು. ವಿಂಗ್ ಕಮಾಂಡರ್ ಹನುಮಂತರಾವ್ ಪತ್ನಿ ಕೈಗೆ ಏರ್ ಪೋರ್ಸ್ ಸಿಬ್ಬಂದಿ ರಾಷ್ಟ್ರಧ್ವಜ, ಕ್ಯಾಪ್ ಹಸ್ತಾಂತರಿಸಿದರು. ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಏರ್‌ಪೋರ್ಸ್ ಸಿಬ್ಬಂದಿ ಗೌರವ ಸಲ್ಲಿಸಿದರು. ಬಳಿಕ ಸಹೋದರ ಪ್ರವೀಣ್ ಸಾರಥಿ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಂತ್ಯಕ್ರಿಯೆಯಲ್ಲಿ ತಂದೆ, ತಾಯಿ, ಪತ್ನಿ, ಸಹೋದರ, ಪುತ್ರಿ, ಪುತ್ರ ಭಾಗಿಯಾಗಿದ್ದರು.
ಇದನ್ನೂ ಓದಿ : ಯುದ್ಧ ವಿಮಾನ ದುರಂತ: ಪೈಲಟ್ ಹನುಮಂತರಾವ್ ಸಾರಥಿಗೆ ಬೆಳಗಾವಿಯಲ್ಲಿ ಗಣ್ಯರಿಂದ ಅಂತಿಮ ನಮನ