ಬೆಳಗಾವಿ/ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಮೂನೆ-3ರ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಇನ್ನೆರಡು ತಿಂಗಳೊಳಗಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಸಚಿವ ರಹೀಂಖಾನ್ ವಿಧಾನಸಭೆಗೆ ತಿಳಿಸಿದ್ದಾರೆ.
ಇಂದಿನ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಭೀಮಣ್ಣ ನಾಯಕ್ ಮಾತನಾಡಿ, ಶಿರಸಿ, ಸಿದ್ಧಾಪುರ ಕ್ಷೇತ್ರದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಫಾರಂ ನಂ-3 ನೀಡುತ್ತಿಲ್ಲ. ಇದರಿಂದ ಪಟ್ಟಣ, ಪಂಚಾಯಿತಿ, ನಗರಸಭೆ, ಪುರಸಭೆಗಳಲ್ಲಿರುವ ತಮ್ಮ ಮನೆಗಳ ನಿರ್ಮಾಣಕ್ಕೆ ಸಾಲ ಪಡೆಯಲು ಅವಕಾಶಗಳಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಇದಕ್ಕೆ ಬೆಂಬಲಿಸಿ, ಗ್ರಾಮ ಪಂಚಾಯಿತಿಗಳಿಂದ ಮೇಲ್ದೆರ್ಜೆಗೇರಿರುವ ನಗರ ಸಂಸ್ಥೆಗಳಲ್ಲಿ ಅರ್ಜಿ ನಮೂನೆ-11 ಬಿಯನ್ನು ನೀಡುತ್ತಿಲ್ಲ. ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ಇದಕ್ಕೆ ಶಾಸಕರಾದ ಕೋನರೆಡ್ಡಿ, ಸತೀಶ್ ಸೈಲ್ ಸೇರಿದಂತೆ ಇತರ ಶಾಸಕರು ಧ್ವನಿಗೂಡಿಸಿದರು.
ನಂತರ ಮಾತನಾಡಿದ ಸಚಿವ ರಹೀಂಖಾನ್, ಇದು ರಾಜ್ಯಾದ್ಯಂತ ಗಂಭೀರ ಸ್ವರೂಪದ ಸಮಸ್ಯೆಯಾಗಿದೆ. ಅದರ ನಿವಾರಣೆಗಾಗಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಈಗಾಗಲೇ ಎರಡು ಸಭೆಗಳಾಗಿದ್ದು, ಹಿಂದಿನ ಏಳೆಂಟು ದಿನಗಳಲ್ಲಿ ಮೂರನೇ ಸಭೆ ನಡೆಯಲಿದೆ. ಅಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡು ಬಿಬಿಎಂಪಿಯ ಮಾದರಿಯಲ್ಲಿ ಬಿ ಖಾತಾಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಹಿಂದೆ ಹಳೆಯ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಯೋಜಿತ ನಕ್ಷೆಗಳಿರುವುದಿಲ್ಲ. ಫಾರಂ-ಸಿ ನೀಡಲು ಯೋಜಿತ ನಕ್ಷೆ, ನಿರಕ್ಷೇಪಣಾ ಪತ್ರ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳು ಲಭ್ಯವಿಲ್ಲದ ಕಾರಣ ಸಮಸ್ಯೆ ಹೆಚ್ಚಾಗಿದೆ. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಂಡು 2 ತಿಂಗಳೊಳಗಾಗಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಸದನಕ್ಕೆ ಸಚಿವರು ಭರವಸೆ ನೀಡಿದರು.
ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿಗಳನ್ನು ಇನ್ನು 15 ದಿನದಲ್ಲಿ ಕೈಗೆತ್ತಿಕೊಳ್ಳುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದರು.
2018-19ನೇ ಸಾಲಿನಲ್ಲಿ ವಿಜಯಪುರದ ಕುಡಿಯುವ ನೀರಿನ ಯೋಜನೆಯ ಅಂದಾಜು ಪಟ್ಟಿಯನ್ನು ಪರಿಷ್ಕರಿಸಿ 52 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿತ್ತು. ಈ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ ಹಣಕಾಸು ಇಲಾಖೆಯವರು ಈ ಹಿಂದೆ 32 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈಗ ಹೆಚ್ಚುವರಿಯಾಗಿ ಹಣ ನೀಡಲು ಸಾಧ್ಯವಿಲ್ಲ. ಬೇರೆ ಬೇರೆ ಮೂಲಗಳಿಂದ ಹಣವನ್ನು ಕ್ರೂಢೀಕರಿಸಿ ಎಂದು ಹೇಳಿದ್ದರು. ಅದರಂತೆ ಈ ಯೋಜನೆಗೆ ಅವಶ್ಯಕ ಇರುವ ಅನುದಾನವನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಸ್ಥಳೀಯ ಸಂಸ್ಥೆಯ ಸ್ವಂತ ಅನುದಾನ, 15 ನೇ ಹಣಕಾಸು ಆಯೋಗದ ಅನುದಾನ, ನಗರ ಸ್ಥಳೀಯ ಸಂಸ್ಥೆಯ ವಾಣಿಜ್ಯ ಸಾಲ ಅಥವಾ ಅಮೃತ್-2.0 ಯೋಜನೆಯಡಿ ಕೈಗೊಳ್ಳುವಂತೆ ಸೂಚಿಸಿರುತ್ತದೆ. ಹಾಗಾಗಿ ಒಟ್ಟಾರೆ 52 ಕೋಟಿ ರೂ. ಹಣ ಕ್ರೋಢೀಕರಿಸಿ ಯೋಜನೆಯನ್ನು ಇನ್ನು ಹದಿನೈದು ದಿನಗಳ ಒಳಗೆ ಆರಂಭಿಸುವುದಾಗಿ ತಿಳಿಸಿದರು.
ಈ ಕಾಮಗಾರಿಯನ್ನು ಕೈಗೊಳ್ಳದೇ ಇರುವುದರಿಂದ ಪಿಎಸ್‌ಸಿ ಕೊಳವೆ ಮಾರ್ಗದಲ್ಲಿ ಪದೇ ಪದೇ ಪೈಪ್‌ಗಳು ಒಡೆದು ಸಾಕಷ್ಟು ನೀರು ಸೋರಿಕೆಯಾಗುತ್ತಿರುವುದು, ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ಸಾಕಷ್ಟು ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಆರ್ಥಿಕ ಇಲಾಖೆಯ ಅಭಿಪ್ರಾಯದಂತೆ ಈ ಯೋಜನೆಯನ್ನು ಪೂರೈಸುತ್ತೇವೆ ಎಂದರು.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆ ಇಲ್ಲ: ಸಚಿವ ಬೈರತಿ ಸುರೇಶ್