ಬೆಳಗಾವಿ/ಬೆಂಗಳೂರು: ''ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು'' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಇಂದು ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪ್ರದೀಪ್ ಈಶ್ವರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''2019-20ನೇ ಸಾಲಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ವಿತರಿಸಲಾಗುತ್ತಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗೆ ನಿರಂತರವಾಗಿ ಹಾಜರಾಗಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತಿದೆ. ಕೇಂದ್ರ ಪ್ರಾಯೋಜಿತ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ತಮ್ಮ ವ್ಯಾಪ್ತಿಯನ್ನು ಮೀರಿದ ಶಾಲೆಗಳಿಗೆ ಕ್ರಮಿಸಲು ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 600 ರೂ.ಗಳಂತೆ ಆರು ತಿಂಗಳಿಂದ ಸಾರಿಗೆ ಭತ್ಯೆ ನೀಡಲಾಗುತ್ತಿದೆ" ಎಂದರು. ಇದೇ ವೇಳೆ, "ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸರಕಾರಿ ಶಾಲಾ ಮಕ್ಕಳಿಗೆ ವಿದ್ಯಾವಿಕಾಸ ಯೋಜನೆಯಡಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಉಚಿತವಾಗಿ ನೀಡಲಾಗುತ್ತಿದೆ" ಎಂದು ಹೇಳಿದರು.
9,604 ಶಾಲಾ ಕೊಠಡಿಗಳ ನಿರ್ಮಾಣ: ''2020-21ರಿಂದ 2022-23ನೇ ಸಾಲಿನವರೆಗೆ 7,098 ಶಾಲೆಗಳಿಗೆ 9,604 ಕೊಠಡಿಗಳ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳಿಗೆ ಒಟ್ಟು 129768.90 ಲಕ್ಷ ರೂ.ಗಳು ನಿಗದಿಯಾಗಿದ್ದು, 9450.139 ಲಕ್ಷ ರೂ. ಬಿಡುಗಡೆ ಮಾಡಿ ಕ್ರಮವಹಿಸಲಾಗಿದೆ'' ಎಂದು ಮಧು ಬಂಗಾರಪ್ಪ ಅವರು ಯು.ಬಿ.ಬಣಕಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
"ಈ ಕೊಠಡಿಗಳ ನಿರ್ಮಾಣಕ್ಕೆ ಉಂಟಾಗುವ ಕೊರತೆ ಅನುದಾನವನ್ನು 2023-24ನೇ ಸಾಲಿನಲ್ಲಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಆಯವ್ಯಯದಲ್ಲಿ ಒದಗಿಸಲಾದ ಅನುದಾನ ಲಭ್ಯತೆ ಆಧರಿಸಿ ಅಗತ್ಯತೆಗೆ ಅನುಗುಣವಾಗಿ ಹಂತಹಂತವಾಗಿ ರಾಜ್ಯಾದ್ಯಂತ ಶಾಲೆಗಳಲ್ಲಿ ಕೊಠಡಿ ನಿರ್ಮಿಸಲು ಕ್ರಮವಹಿಸಲಾಗುತ್ತಿದೆ'' ಎಂದು ತಿಳಿಸಿದರು.
''ಮಲೆನಾಡು ಭಾಗದ ಎಲ್ಲ ಸರಕಾರಿ ನೌಕರರಿಗೆ 6ನೇ ರಾಜ್ಯ ವೇತನ ಆಯೋಗದ ಶಿಫಾರಸಿನ ಅನ್ವಯ ಗಿರಿತಾಣ ಭತ್ಯೆ ರದ್ದುಪಡಿಸಿ ಆದೇಶಿಸಿರುವುದರಿಂದ ಚಿಕ್ಕಮಗಳೂರು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸದ್ಯಕ್ಕೆ ಗಿರಿಭತ್ಯೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ'' ಎಂದು ಸದಸ್ಯ ನಯನಾ ಮೋಟಮ್ಮರ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಉತ್ತರಿಸಿದರು.
ಇದನ್ನೂ ಓದಿ: ಹಣವಿಲ್ಲದೇ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ: ಆರ್ ಅಶೋಕ್ ವಾಗ್ದಾಳಿ