ಚಿಕ್ಕೋಡಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಪತಿಯನ್ನು ಕೊಲೆ ಮಾಡಿದ ಪತ್ನಿಯು ಜೆಸಿಬಿ ಮೂಲಕ ಗುಂಡಿ ತೋಡಿಸಿ ಹೂತು ಹಾಕಿದ ಘಟನೆ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಕಾಗಲ್ ತಾಲೂಕಿನ ನೇರ್ಲೆ ಗ್ರಾಮದ ಸಚಿನ್ ಸದಾಶಿವ ಭೋಪಳೆ(35) ಕೊಲೆಗೀಡಾಗಿರುವ ವ್ಯಕ್ತಿ. ಕೆಲ ದಿನಗಳ ಹಿಂದೆ ಸಚಿನ್ ಮತ್ತು ಆತನ ಪತ್ನಿ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮಕ್ಕೆ ಬಂದಿದ್ದರು. ಪತಿ ಸಚಿನ್, ಪತ್ನಿ ಅನಿತಾ ಮೇಲೆ ಆಗಾಗ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ. ಹೀಗಾಗಿ ಇವರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಸೆಪ್ಟೆಂಬರ್ 3 ರಂದು ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಅದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಅನಿತಾ ಕಟ್ಟಿಗೆಯಿಂದ ಹೊಡೆದು ಪತಿ ಸಚಿನ್ಅನ್ನು ಕೊಲೆ ಮಾಡಿದ್ದಾಳೆ.
ಪತಿಯನ್ನು ಕೊಲೆ ಮಾಡಿದ ಅನಿತಾ, ಎಮ್ಮೆ ಸತ್ತಿದೆ ಹೂಳಲು ಗುಂಡಿ ತೋಡಬೇಕೆಂದು ರಾತ್ರೋರಾತ್ರಿ ಜೆಸಿಬಿ ಕರೆಸಿ ಗುಂಡಿ ತೋಡಿಸಿ, ಸಚಿನ್ ಮೃತದೇಹವನ್ನು ಹೂತು ಹಾಕಿದ್ದಳು. ಈಕೆಯ ಕೃತ್ಯಕ್ಕೆ ಸಹೋದರ ಹಾಗೂ ಸಹೋದರಿ ಸಹಕರಿಸಿದ್ದರು ಎನ್ನಲಾಗ್ತಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳ ಬಂಧನಕ್ಕೆ ನಿಪ್ಪಾಣಿ ಗ್ರಾಮೀಣ ಪೊಲೀಸರು ಬಲೆ ಬೀಸಿದ್ದಾರೆ. ಹತ್ಯೆ ಆರೋಪಿಗಳಾದ ಮೃತನ ಪತ್ನಿ ಅನಿತಾ ಸಚಿನ್ ಭೋಪಳೆ (35), ಆಕೆಯ ಸಹೋದರ ಹಂಚಿನಾಳ ಗ್ರಾಮದ ಕೃಷ್ಣಾತ್ ಅಲಿಯಾಸ್ ಪಿಂಟು ರಾಜಾರಾಮ ಘಾಟಗೆ (26) ಸಹೋದರಿ ಕಾಗಲ್ ತಾಲೂಕಿನ ಸಿದ್ಧನೇರ್ಲಿ ಗ್ರಾಮದ ವನೀತಾ ಕೃಷ್ಣಾತ್ ಚವಾಣ (29) ಮತ್ತು ಹುನ್ನರಗಿ ಗ್ರಾಮದ ಗಣೇಶ ಅಣ್ಣಪ್ಪಾ ರೇಡೇಕರ (21) ಸೇರಿ ನಾಲ್ಕು ಜನ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಮೃತದೇಹ ಹೂತು ಹಾಕಿದ್ದ ಸ್ಥಳಕ್ಕೆ ಗುಂಡಿ ತೋಡಿದ ಜೆಸಿಬಿ ಚಾಲಕನನ್ನು ಕರೆದುಕೊಂಡು ಹೋಗಿ ಶವ ಹೊರತೆಗೆಸಿದ್ದಾರೆ.