ಬೆಳಗಾವಿ: ವಿಧವೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಕಾಮುಕನಿಗೆ ಬೆಳಗಾವಿಯ ಎಂಟನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ರಮೇಶ್ ಲಕ್ಷ್ಮಣ ಜಾಧವ್(31) ಗಲ್ಲು ಶಿಕ್ಷೆಗೆ ಒಳಗಾದವ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ 2016ರಲ್ಲಿ ಈ ಘಟನೆ ನಡೆದಿತ್ತು. ಜನತಾ ಮನೆ ಕೊಡಿಸುವುದಾಗಿ ನಂಬಿಸಿ ವಿಧವೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ರಮೇಶ್ ಬಳಿಕ ಆಕೆಯನ್ನು ಹತ್ಯೆಗೈದಿದ್ದ.
ಈ ಕುರಿತು ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ವಿ.ಬಿ.ಸೂರ್ಯವಂಶಿ, ಕಾಮುಕನಿಗೆ ಗಲ್ಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕಿರಣ್ ಪಾಟೀಲ್ ವಕಾಲತ್ತು ವಹಿಸಿದ್ದರು.