ಬೆಳಗಾವಿ: ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಹೊರತಾಗಿಯೂ ಪ್ರಸ್ತುತ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಯ ನಾಲ್ವರು ಮಂತ್ರಿಗಳಿದ್ದಾರೆ. ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಜವಳಿ ಹಾಗೂ ಅಲ್ಪಸಂಖ್ಯಾತ ಇಲಾಖೆ ಸಚಿವ ಶ್ರೀಮಂತ ಪಾಟೀಲ್ ಸಚಿವರಾಗಿದ್ದಾರೆ.
ಉಮೇಶ ಕತ್ತಿ ಹಾಗೂ ಶ್ರೀಮಂತ ಪಾಟೀಲ್ ಹೊರತುಪಡಿಸಿದರೆ ಇನ್ನುಳಿದಂತೆ ಲಕ್ಷ್ಮಣ ಸವದಿ ರಾಯಚೂರು ಹಾಗೂ ಶಶಿಕಲಾ ಜೊಲ್ಲೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಿದ್ದಾರೆ. ಇತ್ತೀಚೆಗಷ್ಟೇ ಸಂಪುಟ ಸೇರಿರುವ ಉಮೇಶ ಕತ್ತಿ ಅವರಿಗೆ ಆಹಾರ ನಾಗರಿಕ ಸರಬರಾಜು ಇಲಾಖೆ ಹೊಣೆಯನ್ನಷ್ಟೇ ನೀಡಲಾಗಿದ್ದು, ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಲಾಗಿಲ್ಲ. ರಮೇಶ ಜಾರಕಿಹೊಳಿ ಅವರಿಂದ ತೆರವಾಗಿರುವ ಬೆಳಗಾವಿ ಉಸ್ತುವಾರಿ ಹೊಣೆಯನ್ನು ಉಮೇಶ ಕತ್ತಿ ಅವರಿಗೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಹಿರಿತನ ಆಧರಿಸಿ ಹೊಣೆ:
ಹುಕ್ಕೇರಿ ವಿಧಾನಸಭೆ ಕ್ಷೇತ್ರದ ಶಾಸಕ ಉಮೇಶ ಕತ್ತಿ ರಾಜ್ಯ ವಿಧಾನಸಭೆಯ ಅತಿ ಹಿರಿಯ ಸದಸ್ಯ. 9 ಚುನಾವಣೆಯನ್ನು ಎದುರಿಸಿರುವ ಉಮೇಶ ಕತ್ತಿ 8 ಸಲ ಗೆಲುವು ದಾಖಲಿಸಿದ್ದಾರೆ. ಅಲ್ಲದೇ ಮೂರು ಸಲ ಬೆಳಗಾವಿ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಉಮೇಶ ಕತ್ತಿ ಅವರ ಹಿರಿತನ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಈ ಹಿಂದೆ ಕೆಲಸ ಮಾಡಿರುವ ಕಾರಣಕ್ಕೆ ಉಮೇಶ ಕತ್ತಿ ಅವರಿಗೆ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಜಾರಕಿಹೊಳಿ ಸಹೋದರರ ಜೊತೆಗೆ ಉಮೇಶ ಕತ್ತಿ ರಾಜಕೀಯವಾಗಿ ಉತ್ತಮ ಸಂಬಂಧ ಹೊಂದಿದ್ದಾರೆ. ಒಂದು ವೇಳೆ ಸಿಎಂ ಉಮೇಶ ಕತ್ತಿ ಅವರಿಗೆ ಉಸ್ತುವಾರಿ ಹೊಣೆ ನೀಡಿದರೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆಗಲಿ ಅಥವಾ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರೋಧ ಮಾಡುವುದಿಲ್ಲ. ಈ ಕಾರಣಕ್ಕೆ ಉಮೇಶ ಕತ್ತಿಗೆ ತವರು ಜಿಲ್ಲೆಯ ಉಸ್ತುವಾರಿ ಹೊಣೆ ಹೊರುವ ಭಾಗ್ಯ ಮತ್ತೊಮ್ಮೆ ಸಿಗುವುದು ನಿಶ್ಚಿತವಾಗಿದೆ.
ಇದನ್ನೂ ಓದಿ: ಅಣ್ಣನನ್ನು ರಾಜಕೀಯವಾಗಿ ಮುಗಿಸಲು ನಕಲಿ ಸಿಡಿ ಬಳಕೆ: ಲಖನ್ ಜಾರಕಿಹೊಳಿ
ಉಸ್ತುವಾರಿಗಾಗಿ ಸವದಿ-ಜೊಲ್ಲೆ ಲಾಬಿ:
2018 ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರು ಹೈಕಮಾಂಡ್ ಕೃಪೆಯಿಂದ ಹಾಲಿ ಸರ್ಕಾರದಲ್ಲಿ ಸಾರಿಗೆ ಇಲಾಖೆಯ ಜೊತೆಗೆ ಡಿಸಿಎಂ ಹುದ್ದೆಯನ್ನು ಅಲಂಕರಿಸಿದ್ದಾರೆ. ಎರಡನೇ ಬಾರಿಗೆ ಗೆಲುವು ದಾಖಲಿಸಿದ್ದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೂ ಮಹಿಳಾ ಕೋಟಾದಡಿ ಸಚಿವರಾಗುವ ಅವಕಾಶ ಸಿಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆ ಅವರು ಸಚಿವರಾಗಿದ್ದರು. ಬೆಳಗಾವಿ ಉಸ್ತುವಾರಿ ಸಚಿವಸ್ಥಾನವನ್ನು ನೆರೆ ಜಿಲ್ಲೆಯ ಜಗದೀಶ ಶೆಟ್ಟರ್ ಅವರಿಗೆ ನೀಡಲಾಯಿತೇ ಹೊರತು ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆಗೆ ಬೆಳಗಾವಿ ಉಸ್ತುವಾರಿ ನೀಡಿರಲಿಲ್ಲ. ಉಪಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಗೆಲುವು ದಾಖಲಿಸುತ್ತಿದ್ದಂತೆ ಜಲಸಂಪನ್ಮೂಲ ಖಾತೆ ಜೊತೆಗೆ ಬೆಳಗಾವಿ ಉಸ್ತುವಾರಿ ಸಚಿವ ಸ್ಥಾನ ಪಡೆದುಕೊಂಡರು. ಇದೀಗ ರಾಸಲೀಲೆ ಪ್ರಕರಣದಿಂದ ರಮೇಶ ಜಾರಕಿಹೊಳಿ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ತವರು ಜಿಲ್ಲೆಯ ಉಸ್ತುವಾರಿ ಪಟ್ಟ ಅಲಂಕರಿಸಲು ಶಶಿಕಲಾ ಜೊಲ್ಲೆ ಹಾಗೂ ಲಕ್ಷ್ಮಣ ಸವದಿ ಸದ್ದಿಲ್ಲದೇ ಕಸರತ್ತು ನಡೆಸಿದ್ದಾರೆ. ಆದರೆ ಈ ಇಬ್ಬರು ನಾಯಕರು ಜಾರಕಿಹೊಳಿ ಸಹೋದರರ ಜೊತೆಗೆ ಉತ್ತಮ ಸಂಬಂಧ ಹೊಂದಿಲ್ಲ. ಮುಖ್ಯಮಂತ್ರಿ ಈ ಇಬ್ಬರಿಗೆ ಉಸ್ತುವಾರಿ ನೀಡಲು ಮುಂದಾದರೂ ಜಾರಕಿಹೊಳಿ ಸಹೋದರರು ವಿರೋಧಿಸುತ್ತಾರೆ. ಈ ಕಾರಣಕ್ಕೆ ಸಿಎಂ ಅವರು ಎಚ್ಚರಿಕೆ ಹೆಜ್ಜೆ ಇಡುತ್ತಿದ್ದು, ಹಿರಿತನ ಹೊಂದಿರುವ ಹಾಗೂ ಜಾರಕಿಹೊಳಿ ಸಹೋದರರ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಉಮೇಶ ಕತ್ತಿಗೆ ಬೆಳಗಾವಿ ಉಸ್ತುವಾರಿ ಹೊಣೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಜಗದೀಶ ಶೆಟ್ಟರ್ಗೆ ಡೌಟು?:
ಏಪ್ರಿಲ್ ಮೊದಲ ವಾರದಲ್ಲಿ ಬೆಳಗಾವಿ ಲೋಕಸಭೆ ಉಪಚುನಾವಣೆ ಘೋಷಣೆ ಆಗಲಿದೆ. ತವರು ಜಿಲ್ಲೆಯ ನಾಯಕರಿಗೆ ಸಚಿವ ಸ್ಥಾನ ನೀಡಬೇಕಾದ ಅನಿವಾರ್ಯತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಎದುರಾಗಿದೆ. ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಕೂಡ ಹೆಚ್ಚುವಾರಿಯಾಗಿ ಬೆಳಗಾವಿ ಉಸ್ತುವಾರಿ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ ಜಗದೀಶ ಶೆಟ್ಟರ್ ಅವರಿಗೆ ಈ ಸಲ ಉಸ್ತುವಾರಿ ಸಚಿವಸ್ಥಾನ ಸಿಗುವ ಸಾಧ್ಯತೆ ಕಡಿಮೆ. ರಮೇಶ ಜಾರಕಿಹೊಳಿ ಬದಲಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂಪುಟ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಕೆಎಂಎಫ್ ನಂಥ ಮಹತ್ವದ ಹುದ್ದೆ ತ್ಯಜಿಸಿ ಬಾಲಚಂದ್ರ ಜಾರಕಿಹೊಳಿ ಮಂತ್ರಿ ಆಗುವ ಸಾಧ್ಯತೆ ಕಡಿಮೆ. ರಾಸಲೀಲೆ ಪ್ರಕರಣದಲ್ಲಿ ದೋಷಮುಕ್ತರಾದ ಮೇಲೆ ಬಿಜೆಪಿ ನಾಯಕರು ಬಯಸಿದ್ರೆ ಮಾತ್ರ ರಮೇಶ ಮತ್ತೊಮ್ಮೆ ಸಚಿವರಾಗುತ್ತಾರೆ. ಇಲ್ಲವಾದರೆ ಬೆಳಗಾವಿ ಜಿಲ್ಲೆಯಲ್ಲಿ ಕತ್ತಿ ಸಹೋದರರ ಹಿಡಿತ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.