ಬೆಳಗಾವಿ: ಹಿಂದಿನ ಸರ್ಕಾರಗಳೂ ತಮಿಳುನಾಡಿಗೆ ನೀರು ಬಿಟ್ಟಿವೆ. ಈಗ ಮಾತಾಡುವವವರೂ ಆಗ ನೀರು ಬಿಟ್ಟಿದ್ದರು. ಹಾಗಾಗಿ, ಆದೇಶ ಯಾರು ಮಾಡಿದ್ದಾರೋ ಅವರ ವಿರುದ್ಧ ಪ್ರತಿಭಟನೆ ಮಾಡಬೇಕು. ಆದರೆ, ಇದಕ್ಕೆ ತದ್ವಿರುದ್ಧವಾಗಿ ನಮ್ಮ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡಿದೆ. 25 ಜನ ಎಂಪಿಗಳಿದ್ದಾರೆ. ಅವರು ಪ್ರಾಧಿಕಾರದ ಮುಂದೆ ಮಾತನಾಡಬೇಕಿತ್ತು. ಯಾವ್ಯಾವ ಸಿಎಂಗಳು ಎಷ್ಟೆಷ್ಟು ನೀರು ಬಿಟ್ಟಿದ್ದಾರೆ ಎಂಬ ಲೆಕ್ಕವನ್ನು ನೀವೇ ತೆಗೆಯಿರಿ. ಅಲ್ಲದೇ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸರ್ಕಾರ ಇದ್ದಾಗಲೂ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಮೊದಲಿಂದಲೂ ತಮಿಳುನಾಡಿನವರು ಹೆಚ್ಚು ಪ್ರಭಾವ ಬೀರುತ್ತಿದ್ದಾರೆ ಎಂದರು.
ಕಾವೇದಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ಕೇಂದ್ರ ಸರ್ಕಾರದ ಅಧೀನದಲ್ಲಿದೆ. 25 ಸಂಸದರು ಕೇಂದ್ರಕ್ಕೆ ಅರ್ಥ ಮಾಡಿಸಬೇಕಿತ್ತು. ಯಾರಾದರೂ ಮಧ್ಯಸ್ಥಿಕೆ ವಹಿಸಬೇಕಿತ್ತು. ಕೇಂದ್ರ ನೀರಾವರಿ ಮಂತ್ರಿಗಳು ಅಥವಾ ಅಮಿತ್ ಶಾ ಅಂತವರು ಮಧ್ಯಸ್ಥಿಕೆ ವಹಿಸಬಹುದಿತ್ತು. ಆ ಮೂಲಕ ಎರಡೂ ರಾಜ್ಯಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡಬಹುದಿತ್ತು. ಜಲವಿವಾದದ ಕುರಿತು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಸತೀಶ ಜಾರಕಿಹೊಳಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ ನಾಳೆಯಿಂದ ಮೋಡ ಬಿತ್ತನೆ : ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಮುಂಗಾರು ಮಳೆ ತೀವ್ರ ಕೊರತೆಯಿಂದ ಜಿಲ್ಲೆಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಮಳೆಗಾಗಿ ನಾಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮೂರು ದಿನ ಬೆಳಗಾಂ ಶುಗರ್ಸ್ ವತಿಯಿಂದ ಮೋಡ ಬಿತ್ತನೆ ಮಾಡಲಾಗುತ್ತದೆ. ರಾಜ್ಯ, ಕೇಂದ್ರ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಮೋಡ ಬಿತ್ತನೆಗೆ ಬಳಸುವ ವಿಮಾನಗಳು ಸಾಂಬ್ರಾ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಇನ್ನು, ಮೋಡಗಳ ಲಭ್ಯತೆಯ ಅನುಗುಣವಾಗಿ ಅಲ್ಲಲ್ಲಿ ಮೋಡ ಬಿತ್ತನೆ ಮಾಡಲಾಗುವುದು. ಈ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮೋಡಗಳು ಸಿಗಲಿವೆ ಎನ್ನುವ ಮಾಹಿತಿಯಿದೆ. ಮೋಡ ಬಿತ್ತನೆ ಕಾರ್ಯ ಬೆಳಗಾವಿ ಜಿಲ್ಲೆಗೆ ಅಷ್ಟೇ ಸೀಮಿತವಾಗಿದ್ದು, ಮೂರು ದಿನಕ್ಕಾಗುವ ಖರ್ಚು ವೆಚ್ಚವನ್ನು ಬೆಳಗಾಂ ಶುಗರ್ಸ್‌ನಿಂದ ಭರಿಸಲಾಗುವುದು ಎಂದು ತಿಳಿಸಿದರು.
ಅಭಯ್ ಪಾಟೀಲ್ ವಿರುದ್ಧ ವಾಗ್ದಾಳಿ : ಕಾಂಗ್ರೆಸ್ ಸರ್ಕಾರ, ಸಚಿವರ ಬಗ್ಗೆ ಬಿಜೆಪಿ ಶಾಸಕ ಅಭಯ ಪಾಟೀಲ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಭಯ ಪಾಟೀಲ್ಗೆ ಕಾಂಗ್ರೆಸ್ ಸರ್ಕಾರ, ಬೆಳಗಾವಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬೆಳಗಾವಿ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸಾಕಷ್ಟು ಅಕ್ರಮ ಎಸಗಿದ್ದಾರೆ. ಬೆಳಗಾವಿ ಮಾತ್ರ ಸ್ಮಾರ್ಟ್ ಆಗದೆ ಹಾಗೇ ಉಳಿದಿದೆ. ಆದರೆ ಅಭಯ ಪಾಟೀಲ್ ಮಾತ್ರ ಸ್ಮಾರ್ಟ್ ಆಗಿದ್ದಾರೆ. ಮಹಾನಗರ ಪಾಲಿಕೆಯಲ್ಲೂ ಅಕ್ರಮ ಮಾಡಿದ್ದಾರೆ ಎಂದು ಆರೋಪಿಸಿದರು.
ಮೈತ್ರಿಯಿಂದ ಕಾಂಗ್ರೆಸ್ಗೆ ನಷ್ಟವಿಲ್ಲ : ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಯಾವುದೇ ನಷ್ಟವಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಜೆಡಿಎಸ್ ಜತೆ ಕೈ ಜೋಡಿಸಿದ್ದರಿಂದ ನಮಗೆ ನಷ್ಟವಾಯಿತು. ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಯಿಂದ ಕಾಂಗ್ರೆಸ್ ಪೂರ್ಣ ಬಹುಮತದ ಸರ್ಕಾರ ಬಂದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಲಾಭ, ನಷ್ಟವಾಗುತ್ತದೆ ಎಂದು ಕಾದು ನೋಡೋಣ ಎಂದರು.
ಇದನ್ನೂ ಓದಿ : ಕರ್ನಾಟಕ ಬಂದ್ಗೆ ಅವಕಾಶ ಇಲ್ಲ, ಸಾರ್ವಜನಿಕರಿಗೆ ರಕ್ಷಣೆ ಕೊಡುತ್ತೇವೆ: ಡಿಸಿಎಂ ಡಿ ಕೆ ಶಿವಕುಮಾರ್