ಬೆಳಗಾವಿ : ಕುರಿ ಸಾಕಾಣಿಕೆ, ಉಣ್ಣೆ ಉತ್ಪಾದಕ ಕೂಲಿ ಕಾರ್ಮಿಕರ ಏಳಿಗೆಗಾಗಿ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಕುರುಬರ ಸಂಘಗಳ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ತಾಲೂಕಿನ ಶಿಂದೊಳ್ಳಿ ಗ್ರಾಮದ ಕನಕದಾಸ ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಆವರಣದಲ್ಲಿ ಬೆಳಗಾವಿ ಜಿಲ್ಲೆ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರು ಕುರುಬರ ಸಮುದಾಯಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಸರ್ಕಾರ ಬದಲಾದ ಬಳಿಕ ಯೋಜನೆಗಳು ನೆನಗುದಿಗೆ ಬಿದ್ದಿವೆ. ಇವುಗಳನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತೇವೆ. ಶಿಂದೋಳಿ ಕೂಲಿ ಕಾರ್ಮಿಕರಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಕುರಿ ಸಾಕಾಣಿಕೆಯಲ್ಲಿ ಬೆಳಗಾವಿ ಪ್ರಥಮ : ರಾಜ್ಯದಲ್ಲಿ ಅತಿ ಹೆಚ್ಚಿನ ಕುರಿ ಸಾಕಾಣಿಕೆ ಮಾಡುವಲ್ಲಿ ಬೆಳಗಾವಿ ಜಿಲ್ಲೆ ಮುಂದಿದೆ. ಇಲ್ಲಿನ ಉತ್ಪಾದನೆಗಳು ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಗೆ ರಫ್ತಾಗುತ್ತದೆ. ಇಲ್ಲಿನ ಕೂಲಿ ಕಾರ್ಮಿಕರನ್ನು ಬೆಳೆಸುವ ಪ್ರಯತ್ನ ಮಾಡುತ್ತೇವೆ. ಬಿಡಿಸಿಸಿ ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಬಹುದು. ಸಂಘಟನೆಗಳಲ್ಲಿ ಸಮಸ್ಯೆ ಇದ್ದರೆ ಜಿಲ್ಲಾಡಳಿತ ಮೂಲಕ ಪರಿಹರಿಸಲಾಗುವುದು ಎಂದರು.
ಓದಿ: State covid report: 1805 ಮಂದಿಗೆ ಸೋಂಕು, 36 ಜನ ಬಲಿ
ಜಿಲ್ಲೆಯಲ್ಲಿ ಹೆಚ್ಚಿನ ಉಣ್ಣೆ ಉತ್ಪಾದಕ ಘಟಕಗಳ ಪ್ರಾರಂಭಿಸಲು ಸರ್ಕಾರ ಮಟ್ಟದಲ್ಲಿ ಕೆಲಸಗಳನ್ನು ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ಮಹಿಳೆಯರು ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಮೂಲತಃ ಕುರಿ ಸಾಕಾಣಿಕೆಯಲ್ಲಿ ಪಳಗಿರುವ ಸಾವಿರಾರು ಕುರುಬ ಸಮುದಾಯಗಳು ಹೆಚ್ಚಿನ ಕುರಿಗಳನ್ನು ಸಾಕಾಣಿಕೆ ಮಾಡುವ ಕೆಲಸಗಳನ್ನು ಮಾಡಬೇಕು. 2019ರ ಪ್ರವಾಹದ ಬಳಿಕ ಕುರಿ ಸಾಕಾಣಿಕೆಯಲ್ಲಿ ಶೇ.20%ರಷ್ಟು ಇಳಿಕೆ ಕಂಡಿದೆ. ಸಂಘಟನೆಗಳ ಸಹಕಾರದಿಂದ ಹೆಚ್ಚಿನ ಕುರಿಗಳನ್ನು ಸಾಕಾಣಿಕೆ ಮಾಡಬೇಕೆಂದು ಸಲಹೆ ನೀಡಿದರು.