ಬೆಳಗಾವಿ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ನಿರ್ಧಾರ ಕೈಬಿಡುವಂತೆ ಕನ್ನಡ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಕಾಂಗ್ರೆಸ್ ಪಕ್ಷದ ಬೆಂಬಲ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಾಠ ಸಮುದಾಯ ಅಭಿವೃದ್ಧಿ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ರಾಜಕೀಯ ಲಾಭಕ್ಕಾಗಿ ನಿಗಮ ಮಾಡುತ್ತಿರುವುದನ್ನು ನಾವು ವಿರೋಧಿಸುತ್ತಿದ್ದೇವೆ. ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ನಿಗಮ ಸ್ಥಾಪಿಸಬೇಕಿತ್ತು. ಈಗ ಉಪಚುನಾವಣೆ ವೇಳೆ ಮಾಡಿದ್ದೇಕೆ. ಬಜೆಟ್‌ನಲ್ಲಿ ನಿಗಮ ಘೋಷಿಸಿದರೆ ಸ್ಪಷ್ಟವಾಗುತ್ತೆ. ಬೇರೆ ಯೋಜನೆಗಳಿಗೆ ಕೊಡಲು ಸರ್ಕಾರದ ಬಳಿ ಹಣವಿಲ್ಲ. ನಿಗಮಗಳಿಗೆ ಹಣ ಎಲ್ಲಿಂದ ಕೊಡ್ತೀರಾ ಎಂಬುದು ನಮ್ಮ ಪ್ರಶ್ನೆ ಎಂದರು.
ಬಿಜೆಪಿಯಲ್ಲಿ ಯಾರು ಮಂತ್ರಿ ಆಗ್ತಾರೆ, ಸಿಎಂ ಆಗ್ತಾರೆ ಅದು ನಮಗೆ ಸಂಬಂಧಿಸಿದ ವಿಷಯವಲ್ಲ. ನಮಗೆ ಪಕ್ಷ ಕಟ್ಟಬೇಕಿದೆ. ನಮ್ಮ ಪಕ್ಷ ಸಂಘಟನೆ ಬಗ್ಗೆ ಮಾತ್ರ ವಿಚಾರ ಮಾಡ್ತೇವೆ. ಅಭಿವೃದ್ಧಿ ಬಗ್ಗೆ ಬೆಳಗಾವಿ ಬಿಜೆಪಿ ನಾಯಕರಿಗೆ ಇಚ್ಛಾಶಕ್ತಿ ಇಲ್ಲ ಎಂದು ಕುಟುಕಿದರು.