ಅಥಣಿ: ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಚುನಾವಣೆಯಲ್ಲಿ ಒಂದಾದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸದ್ಯ ರಾಜ್ಯ ರಾಜಕೀಯದಲ್ಲಿ ರಾಜಕೀಯ ಚಟುವಟಿಕೆಗಳನ್ನು ಗರಿಗೆದರುವಂತೆ ಮಾಡಿದೆ.
ಇದರ ಬೆನ್ನಲ್ಲೇ ಆರ್.ಎಸ್.ಎಸ್ ಹಿರಿಯರಾದ ಅರವಿಂದ್ ರಾವ್ ದೇಶಪಾಂಡೆ ಅವರು ಡಿಸಿಎಂ ಲಕ್ಷ್ಮಣ್ ಸೌಧಿ ಹಾಗೂ ರಮೇಶ್ ಜಾರಕಿಹೊಳಿ ಮತ್ತು ರಮೇಶ್ ಕತ್ತಿ ಅವರಿಗೆ ಮಾರ್ಗದರ್ಶನದ ಜೊತೆಗೆ ಅವಿರೋಧವಾಗಿ ಆಯ್ಕೆಯಾಗುವ ಸಲಹೆಯನ್ನು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಡಿಸಿಎಂ ಲಕ್ಷ್ಮಣ್ ಸೌಧಿ ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆರ್.ಎಸ್.ಎಸ್ ಉತ್ತರ ಕರ್ನಾಟಕದ ಪ್ರಾಂತದ ಸಂಚಾಲಕ ಅರವಿಂದ್ ರಾವ್ ದೇಶಪಾಂಡೆ ಅವರು ನಮಗೆಲ್ಲಾ ಮಾರ್ಗದರ್ಶನದ ಜೊತೆಗೆ ಸಲಹೆಯನ್ನು ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಒಗ್ಗಟ್ಟಿನಿಂದ ಮಾಡಿ ಮತ್ತು ಎಲ್ಲರೂ ಒಂದೇ ಪಕ್ಷದಲ್ಲಿ ಇರೋದ್ರಿಂದ ಯಾವುದೇ ವೈಮನಸ್ಸು ಬೇಡ ಎಂಬ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ಬೆಳಗಾವಿಯಲ್ಲಿ ಮಂಗಳವಾರ ಸಭೆ ನಡೆಸಲಿದ್ದೇವೆ. ಅವಿರೋಧವಾಗಿ ಆಯ್ಕೆಯಾಗುವ ಪ್ರಯತ್ನಮಾಡುತ್ತೇವೆ ಎಂದು ತಿಳಿಸಿದರು.