ಬೆಳಗಾವಿ: ಜಿಲ್ಲೆಯಲ್ಲಿ ಇದುವರೆಗೂ ಮಿಡತೆ ದಾಳಿ ಬಗ್ಗೆ ಮುನ್ಸೂಚನೆ ಕಂಡುಬಂದಿಲ್ಲ. ಒಂದು ವೇಳೆ ಮಿಡತೆ ದಾಳಿಯಾದರೆ ಬೆಳೆಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸನ್ನದ್ಧವಾಗಿದೆ ಎಂದು ಬೆಳಗಾವಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಹೆಚ್.ಮೊಕಾಶಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ನಾಗ್ಪುರದಲ್ಲಿ ಮಿಡತೆಗಳು ಬಂದಿರುವ ಬಗ್ಗೆ ವರದಿಯಾಗಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಮಿಡತೆಗಳು ಬಂದಿರುವ ಕುರಿತು ವರದಿಯಾಗಿಲ್ಲ. ಆದರೂ ಜಿಲ್ಲೆಗೆ ಮಿಡತೆಗಳು ದಾಳಿ ಮಾಡಿದ್ರೆ, ಅವುಗಳನ್ನು ಕಂಟ್ರೋಲ್ ಮಾಡಲು ಬೇಕಾದ ಔಷಧಿಗಳ ಸಂಗ್ರಹವಿದೆ ಎಂದರು.
ಇನ್ನು ಬೆಳಗಾವಿ ಜಿಲ್ಲೆಯೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವುದರಿಂದ ರೈತರಲ್ಲಿ ಈಗಾಗಲೇ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದ್ದು, ರೈತರಿಗೆ ಔಷಧಿಗಳನ್ನು ಆಯಾ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಅಂಗಡಿಗಳಲ್ಲಿ ದಾಸ್ತಾನು ಸಂಗ್ರಹ ಮಾಡಲಾಗಿದೆ ಎಂದರು.
ಮುಂಗಾರು ಮುನ್ಸೂಚನೆ ನೀಡಿದ್ದರಿಂದ ಈಗಾಗಲೇ ಜಿಲ್ಲೆಯ 193 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯ ನಡೆದಿದೆ. ವಿವಿಧ ಬಗೆಯ 45 ಸಾವಿರ ಕ್ವಿಂಟಲ್ ಬೀಜಗಳ ಸಂಗ್ರಹವನ್ನು ಮಾಡಲಾಗಿದ್ದು, ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ಬೀಜ ತೆಗೆದುಕೊಂಡು, ಒಳ್ಳೆಯ ವಾತಾವರಣದ ಜತೆಗೆ ಭೂಮಿ ಫಲವತ್ತತೆಯ ಹಾಗೂ ಉಷ್ಣತೆ ಕಡಿಮೆ ಇರುವಾಗ ಬಿತ್ತನೆ ಕಾರ್ಯ ಆರಂಭಿಸಬೇಕು ಎಂದರು.