ಬೆಳಗಾವಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಅಭ್ಯರ್ಥಿಗಳನ್ನು 21,795 ಮತದಾರರು ತಿರಸ್ಕಾರ ಮಾಡಿದ್ದಾರೆ ಎಂಬುದು ನೋಟಾಗೆ ಚಲಾವಣೆ ಆಗಿರುವ ಮತಗಳ ಅಂಕಿ ಅಂಶದಿಂದ ತಿಳಿದುಬಂದಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 11,509 ಮತದಾರರು ಯಾವುದೇ ಅಭ್ಯರ್ಥಿಗಳಿಗೆ ಮತದಾನ ಮಾಡಲು ಮನಸ್ಸು ಮಾಡದೇ ನೋಟಾಗೆ ಮತ ಚಲಾಯಿಸಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ 10,289 ಮತದಾರರು ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ. ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಒಟ್ಟು 21 ಸಾವಿರ ಮತದಾರರು ಅಭ್ಯರ್ಥಿಗಳ ಬದಲಾವಣೆಗೆ ಬಯಸಿದ್ದರು. ಆದರೂ ಈ ಬಾರಿಯ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಹಾಗೂ ಚಿಕ್ಕೋಡಿಯಲ್ಲಿ ಕಾಂಗ್ರೆಸ್‍ನ ಅದೇ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.
ಏನಿದು ನೋಟಾ?:
2013ರ ಚುನಾವಣೆಗಿಂತ ಮೊದಲು, ಮತದಾರರಿಗೆ ಅಭ್ಯರ್ಥಿಗಳು ಇಷ್ಟವಾಗದಿದ್ದರೂ ಮತದಾನ ಮಾಡುವ ಅಥವಾ ಮತದಾನ ಪ್ರಕ್ರಿಯೆಯಿಂದಲೇ ಹೊರಗೆ ಉಳಿಯುವ ಪರಿಸ್ಥಿತಿ ಇತ್ತು. ಆ ಕಾರಣಕ್ಕೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತದಾರರಿಗೆ ಇಷ್ಟವಾಗದಿದ್ದರೆ ನೋಟಾ ಮೂಲಕ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿದೆ. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೆ ಈ ಪ್ರಯೋಗವನ್ನು ಮೊದಲು ಜಾರಿಗೆ ತರಲಾಯಿತು. 2014ರ ಲೋಕಸಭಾ ಚುನಾವಣೆಯಲ್ಲಿ ನೋಟಾಗೂ ಒಂದು ಚಿಹ್ನೆ ಕೊಟ್ಟು ವ್ಯಾಪಕ ಪ್ರಚಾರ ಮಾಡಲಾಗಿತ್ತು. ಇದರ ಪರಿಣಾಮವಾಗಿ 543 ಲೋಕಸಭಾ ಕ್ಷೇತ್ರದಲ್ಲಿ ನೋಟಾ ಪರ ಮತ ಚಲಾವಣೆ ಮಾಡಿದ್ದರು.
ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ನೋಟಾಗೆ ಮತ ಹಾಕಲು ಅವಕಾಶವಿದೆ. ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ 30.23 ಲಕ್ಷ ಮತದಾರರ ಪೈಕಿ 8.95 ಲಕ್ಷ ಮತದಾರರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 15.80 ಲಕ್ಷ ಮತದಾರರು ಪಟ್ಟಿಯಲ್ಲಿದ್ದರೂ, 10.67 ಲಕ್ಷ ಮತದಾರರು ಮಾತ್ರ ಮತ ಚಲಾಯಿಸಿದ್ದರು. ಅದೇ ರೀತಿ ಚಿಕ್ಕೋಡಿ ಕ್ಷೇತ್ರದಲ್ಲಿ 14.42 ಲಕ್ಷ ಮತದಾರರ ಪೈಕಿ 10.60 ಲಕ್ಷ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
2014ರಲ್ಲಿ ಸ್ಪರ್ಧಿಸಿದ ಪ್ರಮುಖರು:
ಜಿಲ್ಲೆಯ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿಯಿಂದ ಸುರೇಶ ಅಂಗಡಿ, ಕಾಂಗ್ರೆಸ್‍ನಿಂದ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಪ್ರಕಾಶ ಹುಕ್ಕೇರಿ, ಬಿಜೆಪಿಯಿಂದ ರಮೇಶ ಕತ್ತಿ ಸ್ಪರ್ಧೆ ಮಾಡಿದ ಪ್ರಮುಖರಾಗಿದ್ದರು. ಈ ಬಾರಿ ಮತದಾರರು ಅಭ್ಯರ್ಥಿಗಳಿಗೆ ಮತದಾನ ಮಾಡುತ್ತಾರೋ ಅಥವಾ ಮತ್ತೆ ನೋಟಾ ಬಟನ್ ಒತ್ತುತ್ತಾರೋ ನೋಡಬೇಕು.