ಬೆಳಗಾವಿ: ವೀಸಾ ನಿಯಮ ಉಲ್ಲಂಘಿಸಿ ಧರ್ಮಪ್ರಚಾರ ನಡೆಸಿದ ಆರೋಪದಡಿ ಇಂಡೋನೇಷ್ಯಾದ 10 ಹಾಗೂ ದೆಹಲಿಯ ಇಬ್ಬರನ್ನು ಬೆಳಗಾವಿಯ ಮಾಳಮಾರುತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರವಾಸದ ಹೆಸರಲ್ಲಿ ವೀಸಾ ಪಡೆದಿದ್ದ ಇಂಡೋನೇಷ್ಯಾದ 10 ನಾಗರಿಕರು ದೆಹಲಿಯಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಜಿಲ್ಲೆಗೆ ಆಗಮಿಸಿ ಧರ್ಮಪ್ರಚಾರ ನಡೆಸಿದ್ದರು.
ಮಾರ್ಚ್ 11ರಿಂದ 16ರವರೆಗೆ ನಗರದ ವಿವಿಧ ಮಸೀದಿಗಳಲ್ಲಿ ಧರ್ಮಪ್ರಚಾರ ನಡೆಸಿದ್ದರು. ಟ್ರಾವೆಲ್ ಹಿಸ್ಟರಿ ಆಧರಿಸಿ ಈ ಎಲ್ಲರ ಪಾಸ್ಪೋರ್ಟ್ ವಶಪಡಿಸಿಕೊಂಡಿದ್ದ ಜಿಲ್ಲಾಡಳಿತ, ಅವರನ್ನು ಕ್ವಾರಂಟೈನ್ನಲ್ಲಿ ಇರಿಸಿತ್ತು.
ವೀಸಾ ನಿಯಮ ಉಲ್ಲಂಘನೆ ಆರೋಪದಡಿ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಿಸಿತ್ತು. ದೂರಿನ ಹಿನ್ನೆಲೆಯಲ್ಲಿ ಈ ಎಲ್ಲರನ್ನು ವಶಕ್ಕೆ ಪಡೆದ ಪೊಲೀಸರು ಬೆಳಗಾವಿಯ 2ನೇ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಕೋರ್ಟ್ ಇವರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದ್ದು, ಎಲ್ಲರನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿದೆ.