ಚಿಕ್ಕೋಡಿ (ಬೆಳಗಾವಿ): ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಿಯಂತ್ರಣಕ್ಕಾಗಿ ತಿಳುವಳಿಕೆ ಹೇಳಬೇಕಾದ ಜನಪ್ರತಿನಿಧಿಗಳೇ ಹಳಿತಪ್ಪಿದಂತೆ ಕಾಣುತ್ತಿದೆ. ಇಬ್ಬರು ಡಿಸಿಎಂ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಮಾಡಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿರುವ ನಿಪ್ಪಾಣಿಯಲ್ಲಿ ನಿರ್ಮಿಸಲಾಗಿರುವ ನೂತನ ಪ್ರವಾಸಿ ಮಂದಿರ ಉದ್ಘಾಟನೆಯಲ್ಲಿ ಇಬ್ಬರು ಡಿಸಿಎಂಗಳಾದ ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಅವರು ಭಾಗಿಯಾಗಿದ್ದರು. ಅದೇ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಆದರೆ, ಅವರಲ್ಲಿ ಯಾರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡತೆ ತೋರಲಿಲ್ಲ. ಎಲ್ಲಾ ಗುಂಪು ಗುಂಪಾಗಿಯೇ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿತ್ತು.
ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಹಾರಾಷ್ಟ್ರದ ಗಡಿಯಲ್ಲೇ ಇರುವ ನಿಪ್ಪಾಣಿಯಲ್ಲಿ ನಡೆದ ಸಮಾರಂಭದಲ್ಲಿ ಸಾಮಾಜಿಕ ಅಂತರ ಮರೆತು ಡಿಸಿಎಂಗಳ ಜೊತೆ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಸರ್ಕಾರದ ಮುಖ್ಯ ಸಂಚೇತಕ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೂಡ ಭಾಗಿಯಾಗಿದ್ದರು.