ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾರ್ಭಟಕ್ಕೆ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿರುವ ಮಲಪ್ರಭಾ ನದಿ ತೀರಕ್ಕೆ ಯಾರೂ ತೆರಳದಂತೆ ಡಂಗುರ ಸಾರಿ ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನದಿಯ ಒಳಹರಿವು ಹೆಚ್ಚಾಗಿದೆ. ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿರುವ ನವಿಲುತೀರ್ಥ ಜಲಾಶಯದಿಂದ 10 ಸಾವಿರ ಕ್ಯುಸೆಕ್ ನೀರು ಕೂಡಾ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ರಾಮದುರ್ಗ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿಯ ಆತಂಕ ಶುರುವಾಗಿದೆ. ಹೀಗಾಗಿ, ಡಂಗುರ ಸಾರುವ ಹಾಗೂ ಕಸ ಸಾಗಿಸುವ ವಾಹನಗಳಲ್ಲಿಯೂ ಸ್ಪೀಕರ್ ಮೂಲಕ ಜನರಿಗೆ ಮುನ್ಸೂಚನೆ ನೀಡಲಾಗುತ್ತಿದೆ.