ಚಿಕ್ಕೋಡಿ: ಕಳೆದ ತಿಂಗಳು ಸುರಿದ ಕುಂಭದ್ರೋಣ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಗಳ ಜೊತೆಗೆ ಹಲವಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಈಗ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.
ಚಿಕ್ಕೋಡಿ ಉಪ ವಿಭಾಗದಲ್ಲಿ ಹಾಗೂ ಪಕ್ಕದ ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆದ ತರಕಾರಿ ಜಮೀನಿನಲ್ಲೇ ಕೊಳೆತು ಹೋಗಿವೆ. ಇದರಿಂದ ಅಲ್ಪಸ್ವಲ್ಪ ಉಳಿದಿರುವ ತರಕಾರಿಯ ಬೆಲೆ ದುಬಾರಿಯಾಗಿದೆ.
ಮೊದಲೇ ಕೊರೊನಾದಿಂದ ತತ್ತರಿಸಿರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರಿಗೆ ಬೆಲೆ ಏರಿಕೆಯಿಂದ ಲಾಭದಾಯಕವಾದರೂ ಸಹಿತ ಇನ್ನುಳಿದ ಬಡ ಜನರಿಗೆ ತರಕಾರಿ ಬೆಲೆ ಏರಿಕೆಯಿಂದ ತೊಂದರೆಯಾಗಿದೆ. ಕೇರಳ ಸರ್ಕಾರ ತರಕಾರಿ ಬೆಲೆ ನಿಗದಿ ಮಾಡಿರುವಂತೆ ನಮ್ಮ ಸರ್ಕಾರವೂ ತರಕಾರಿಗೆ ಬೆಲೆ ನಿಗದಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ತರಕಾರಿ ಬೆಲೆ ಏರಿಕೆಯಿಂದಾಗಿ ಸಂತೆಗಳಲ್ಲಿ ಜನರು ತರಕಾರಿ ಖರೀದಿಗೆ ಮುಂದಾಗದಂತಹ ಪರಿಸ್ಥಿತಿ ಎದುರಾಗಿದೆ.