ಬೆಳಗಾವಿ : ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬಾಳಾ ಠಾಕ್ರೆ ಹಾಗೂ ಉದ್ಧವ್ ಠಾಕ್ರೆ ವಿರುದ್ಧ ವಾಟಾಳ್ ನಾಗರಾಜ್ ಕಠಿಣ ಪದಗಳಿಂದ ಶಬ್ದಗಳಿಂದ ಟೀಕಿಸಿದ್ದಾರೆ.
ತಾಲೂಕಿನ ಹಿರೇಬಾಗೇವಾಡಿ ಟೋಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿಚಾರ ಇತ್ಯರ್ಥವಾದ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಅವರಿಗೆ ತಿಳಿದಿಲ್ಲ. ಬೆಳಗಾವಿ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ನಗರದಲ್ಲಿರುವ ಮರಾಠಿ ನಾಮಫಲಕ ತೆಗೆಯಬೇಕು. ಶಿವಸೇನೆ ಮುಖಂಡರು ನಗರದಕ್ಕೆ ಬಂದರೆ ಬಂಧಿಸಬೇಕು. ಬೆಳಗಾವಿ ಹೆಸರಿಗೆ ಮಾತ್ರ ಸುವರ್ಣ ಸೌಧ ನಿರ್ಮಿಸಿದ್ದಾರೆ. ಮುಂದಿನ ಜಂಟಿ ಅಧಿವೇಶನ ಬೆಳಗಾವಿಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಸಂತ್ರಸ್ತರು ಇನ್ನೂ ಬೀದಿಯಲ್ಲಿ ಇದ್ದಾರೆ. 50 ಸಾವಿರ ಕೋಟಿ ಹಣ ಪ್ರವಾಹದಿಂದ ಹಾನಿಯಾಗಿದೆ. ಪ್ರಧಾನಿಮಂತ್ರಿ ಮುಂದೆ ರಾಜ್ಯಕ್ಕೆ ಬರಬೇಕಾದ್ರೆ ಪರಿಹಾರದ ಹಣ ಕೊಟ್ಟು ಬರಬೇಕು. ನನ್ನನ್ನು ಬೆಳಗಾವಿ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ. ಹಿರೇಬಾಗೇವಾಡಿ ಟೋಲ್ ಬಳಿ ನನ್ನನ್ನು ಬಂಧಿಸಿದ್ದಾರೆ. ಕರ್ನಾಟಕ ಪೊಲೀಸ್ ರಾಜ್ಯ ಆಗಬಾರದು. ಹೋರಾಟಗಾರರಿಗೆ ನಮಗೆ ಅಪಮಾನ ಮಾಡಿದ್ದಾರೆ. ಜ.20ರಂದು ಮಹದಾಯಿ ವಿಚಾರವಾಗಿ ಹೋರಾಟ ಕಣಕುಂಬಿಯಲ್ಲಿ ಪ್ರತಿಭಟನೆ ಮಾಡುತ್ತೇನೆ. ಶಿವಸೇನೆ, ಎನ್ಸಿಪಿ ನಾಯಕರನ್ನು ಬೆಳಗಾವಿ ಪ್ರವೇಶ ಕೊಡಬಾರದು ಎಂದು ವಾಟಾಳ್ ಗುಡುಗಿದರು.
ಪೊಲೀಸರ ಕಣ್ಣು ತಪ್ಪಿಸಿ ಮುಂದಿನ ವಾರ ಬೆಳಗಾವಿ ಪ್ರವೇಶ ಮಾಡುತ್ತೇನೆ ಎಂದು ಪೊಲೀಸರಿಗೆ ಸವಾಲು ಹಾಕಿದರು. ಬಳಿಕ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಅವರನ್ನು ನಗರ ಪೊಲೀಸರು ಬಂಧಿಸಿ ಹಿರೇಬಾಗೇವಾಡಿ ಠಾಣೆಗೆ ಕರೆದೊಯ್ದರು.