ಸುರಪುರ: ಕೋವಿಡ್-19 ಕರ್ತವ್ಯನಿರತ ಗ್ರಾಮ ಲೆಕ್ಕಿಗ ಮತ್ತು ಕಂದಾಯ ಇಲಾಖೆ ನೌಕರನ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖಾ ಸಂಘ ಹಾಗೂ ಗ್ರಾಮ ಲೆಕ್ಕಿಗರ ಸಂಘದಿಂದ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.
ಕೊರೊನಾ ವೈರಸ್ ನಿರ್ಮೂಲನೆಯಲ್ಲಿ ಸರ್ಕಾರ ನಡೆಸಿರುವ ಕಾರ್ಯದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕರ್ತವ್ಯನಿರತ ಕಂದಾಯ ಇಲಾಖೆ ನೌಕರರ ಮೇಲೆಯೇ ಪೊಲೀಸರು ಲಾಠಿ ಬೀಸುತ್ತಿದ್ದಾರೆ ಎಂದು ಕಂದಾಯ ಇಲಾಖಾ ಸಂಘ ಹಾಗೂ ಗ್ರಾಮ ಲೆಕ್ಕಿಗರ ಸಂಘದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಮೂಲಕ ಸಲ್ಲಿಸಿದ್ದಾರೆ. ಹುಣಸಗಿಯ ತಹಶೀಲ್ದಾರರ ಆದೇಶದಂತೆ ಪ್ರತಾಪ್ ಎಂಬ ದೇವತ್ಕಲ್ ಗ್ರಾಮ ಲೆಕ್ಕಿಗ ಕರ್ತವ್ಯದ ಮೇಲೆ ಸುರಪುರಕ್ಕೆ ಬಂದಾಗ ಮಹಾತ್ಮ ಗಾಂಧಿ ವೃತ್ತದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಪ್ರತಾಪನ ಬೈಕ್ ಮೇಲೆ ಪಾಸ್ ಅಂಟಿಸಲಾಗಿದೆ. ಇದನ್ನು ನೋಡಿಯೂ ಹೊಡೆದಿರುವುದು ಗ್ರಾಮ ಲೆಕ್ಕಿಗನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯಾಗಿದೆ.
ಈ ಘಟನೆಗಳಿಗೆ ಕಾರಣರಾದ ಪೊಲೀಸ್ ಅಧಿಕಾರಿ ಮತ್ತು ಪೇದೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ನಮ್ಮನ್ನು ಕೋವಿಡ್ ಕರ್ತವ್ಯದಿಂದ ಕೈಬಿಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ. ಪೊಲೀಸರು ಕರ್ತವ್ಯನಿರತ ಕಂದಾಯ ಇಲಾಖೆ ಸಿಬ್ಬಂದಿ ಮೇಲೆಯೇ ಲಾಠಿ ಬೀಸೀರುವುದರಿಂದ ಕಂದಾಯ ಇಲಾಖೆ ಸಂಘ ಹಾಗೂ ಗ್ರಾಮ ಲೆಕ್ಕಿಗರ ಸಂಘ ಗಂಭೀರವಾಗಿ ತೆಗೆದುಕೊಂಡು ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಮನವಿ ಮಾಡಿದ್ದು, ಜಿಲ್ಲಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.