ಚಿಕ್ಕೋಡಿ (ಬೆಳಗಾವಿ) : ಕಾಂಗ್ರೆಸ್ ಪಕ್ಷ ಇಂದು ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಚಿಕ್ಕೋಡಿ ಜಿಲ್ಲೆಯ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಕಾ ಸಾಹೇಬ್ ಪಾಟೀಲ್ ಅವರಿಗೆ ಮಣೆ ಹಾಕಿದೆ. ಆದರೆ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಉತ್ತಮ ಪಾಟೀಲರಿಗೆ ಟಿಕೆಟ್ ಕೈತಪ್ಪಿದ್ದು ನಿರಾಸೆ ಮೂಡಿಸಿದೆ. ಅವರೀಗ ಕೈ ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.
ಮೊದಲನೇ ಪಟ್ಟಿಯಲ್ಲಿ ಯಮಕರಮಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ, ಹುಕ್ಕೇರಿ- ಎ ಬಿ ಪಾಟೀಲ್, ಕುಡಚಿ- ಮಹೇಶ್ ತಮ್ಮಣ್ಣವರ್, ಕಾಗವಾಡ- ರಾಜು ಕಾಗೆ, ಚಿಕ್ಕೋಡಿ- ಗಣೇಶ್ ಹುಕ್ಕೇರಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಎರಡನೇ ಪಟ್ಟಿಯಲ್ಲಿ ನಿಪ್ಪಾಣಿಯ ಕಾಂಗ್ರೆಸ್ ಮಾಜಿ ಶಾಸಕ ಕಾಕಾಸಾಹೇಬ ಪಾಟೀಲರನ್ನು ಕೈ ಅಭ್ಯರ್ಥಿಯೆಂದು ಎಐಸಿಸಿ ಘೋಷಿಸಿದೆ.
ಪಕ್ಷೇತರರಾಗಿ ಕಣಕ್ಕೆ: ಅಂದಿನ ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ಆಪ್ತರಾಗಿದ್ದ ಉತ್ತಮ ಪಾಟೀಲ್ ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಹಿಂದೆ ನಡೆದ ರಾಜಕೀಯ ಬದಲಾವಣೆಯಿಂದ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ದರು. ಆದರೆ ಉತ್ತಮ ಪಾಟೀಲ್ ಯಾವುದೇ ಪಕ್ಷ ಸೇರದೆ ತಟಸ್ಥವಾಗಿದ್ದರು. ಇದರಿಂದ ಎಲ್ಲೋ ಒಂದೆಡೆ ಕಾಂಗ್ರೆಸ್ನಿಂದ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇಟ್ಟಿದ್ದರು. ಆದರೆ ಕೈ ಪಕ್ಷ ಎರಡನೇ ಪಟ್ಟಿಯಲ್ಲಿ ಕಾಕಾ ಸಾಹೇಬ್ ಪಾಟೀಲ್ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಉತ್ತಮ ಪಾಟೀಲ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಹೇಳಿಕೆ ನೀಡಿದ್ದಾರೆ.
ನಿಪ್ಪಾಣಿ ಮತಕ್ಷೇತ್ರ ಹಾಲಿ ಶಾಸಕಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರತಿನಿಧಿಸುವ ಕ್ಷೇತ್ರವಾಗಿದ್ದರಿಂದ ಕಾಂಗ್ರೆಸ್ ವರಿಷ್ಠರು ಅಳೆದು ತೂಗಿ ಜಾತಿ ಲೆಕ್ಕಾಚಾರದ ಪ್ರಕಾರ ಹಾಗೂ ಮಾಜಿ ಶಾಸಕರಾಗಿದ್ದರಿಂದ ಕಾಕಾ ಸಾಹೇಬ್ ಪಾಟೀಲ್ ಅವರನ್ನು ಕಣಕ್ಕಿಳಿಸಿದೆ. ಸ್ಥಳೀಯ ಬಂಡಾಯಗಳಿಗೆ ಕಾಂಗ್ರೆಸ್ ವರಿಷ್ಠರು ಮಣೆ ಹಾಕದೆ ಕಾಕಾ ಸಾಹೇಬ್ ಅವರನ್ನು ಘೋಷಣೆ ಮಾಡಿದೆ. 1999, 2004, 2008 ಮೂರು ಬಾರಿ ನಿಪ್ಪಾಣಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದಲ್ಲದೇ, ಕಳೆದ 2013 ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶಶಿಕಲಾ ಜೊಲ್ಲೆ ವಿರುದ್ಧ ಸೋಲು ಕಂಡಿದ್ದರು. ಇದೀಗ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಶಶಿಕಲಾ ಜೊಲ್ಲೆ ವಿರುದ್ಧ ಸ್ಪರ್ಧಿಸಿ ಅದೃಷ್ಟ ಪರೀಕ್ಷೆಗೆ ಕೈ ಅಭ್ಯರ್ಥಿ ಮುಂದೆ ಬಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ 2ನೇ ಪಟ್ಟಿ: ಬೆಳಗಾವಿ ಜಿಲ್ಲೆಯ 4 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ