ಬೆಳಗಾವಿ: ಗಾಂಜಾ ನಶೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಯುವಕನೊಬ್ಬನಿಗೆ ಚೂರಿ ಇರಿದ ಘಟನೆ ಶಿವಾಜಿ ನಗರದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಅನಿಕೇತ ಮಧುಮತ ಎಂಬಾತನಿಗೆ ಚೂರಿಯಿಂದ ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅನಿಕೇತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಆವರಣವನ್ನು ಕೆಲವರು ಗಾಂಜಾ ಸೇವನೆ ಅಡ್ಡವನ್ನಾಗಿ ಮಾಡಿಕೊಂಡಿದ್ದಾರೆ. ದೇಶಾದ್ಯಂತ ಸಂಜೆ 7 ರಿಂದ ಲಾಕ್ಡೌನ್ ಆದೇಶ ಜಾರಿಯಲ್ಲಿದ್ದರೂ ಈ ಪುಂಡರು ಮಾತ್ರ ರಾತ್ರಿ ಹೊತ್ತಿನಲ್ಲಿ ಗಾಂಜಾ ಸೇವಿಸಿ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಪುಂಡರ ಕಾಟಕ್ಕೆ ಬೇಸತ್ತು ಸ್ಥಳೀಯರು ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ರಿಮ್ಯಾಂಡ್ ಹೋಮ್ ಇದೆ. ಇಲ್ಲಿನ ಆರೋಪಿಗಳು ಕೂಡಾ ಗಾಂಜಾ ಸೇವಿಸುವವರೊಂದಿಗೆ ಶಾಮೀಲಾಗಿ ಸ್ಥಳೀಯರಿಗೆ ಕಿರಿಕಿರಿ ನೀಡುತ್ತಿದ್ದಾರೆಂಬ ಆರೋಪವೂ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತವರಲ್ಲಿ ಈ ರೀತಿಯ ಅನೈತಿಕ ಚಟುವಟಿಕೆ ನಡೆಯತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಮಾರ್ಕೆಟ್ ಠಾಣೆ ಪೊಲೀಸರು ಸ್ಥಳೀಯರಿಗೆ ಧೈರ್ಯ ತುಂಬಿದ್ದಾರೆ.
ಈ ಪ್ರಕರಣ ಸಂಬಂಧ ಮಾರ್ಕೆಟ್ ಠಾಣೆಯ ಪೊಲೀಸರು ಶಿವಾಜಿ ಘಾಟಗೆ, ಸಂಭಾಜಿ ಘಾಟಗೆ, ಅಜೇಯ ಕನ್ನುಕರ್ ಹಾಗೂ ವಿಷ್ಣು ಚವ್ಹಾಣ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.