ಬೆಳಗಾವಿ : ಇಲ್ಲಿನ ಸದಾಶಿವ ನಗರದ ಮನೆಯೊಂದರಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿದ್ದ ಉತ್ತರಪ್ರದೇಶದ ಯುವತಿಯನ್ನು ಬೆಳಗಾವಿ ಎಪಿಎಂಸಿ ಠಾಣೆ ಪೊಲೀಸರು ಮರಳಿ ಪಾಲಕರಿಗೆ ಹಸ್ತಾಂತರ ಮಾಡಿದ ಘಟನೆ ನಡೆದಿದೆ.
ಇಲ್ಲಿನ ಸದಾಶಿವನಗರದ ಮನೆಯೊಂದರಲ್ಲಿ ಅಕ್ರಮ ವೇಶ್ಯಾವಾಟಿಕೆ ಪ್ರಕರಣವನ್ನು ಫೆ.7ರಂದು ಎಪಿಎಂಸಿ ಠಾಣೆ ಪೊಲೀಸರು ಬೇಧಿಸಿ, ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿದ್ದ, ಇಬ್ಬರಲ್ಲಿ ಓರ್ವ ಯುವತಿ ಉತ್ತರಪ್ರದೇಶದಿಂದ ಕಿಡ್ನ್ಯಾಪ್ ಆಗಿದ್ದಳು.
ಆಕೆಯ ಸಂಬಂಧಿಕರು ಕಿಡ್ನ್ಯಾಪ್ ಆಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುಪಿ ಪೊಲೀಸರ ಸಹಾಯದೊಂದಿಗೆ ಸದ್ಯ ಯುವತಿಯನ್ನು ಬೆಳಗಾವಿ ಎಪಿಎಂಸಿ ಪೊಲೀಸರು ಆಕೆಯ ಪಾಲಕರಿಗೆ ಹಸ್ತಾಂತರ ಮಾಡಿದ್ದಾರೆ.
ಓದಿ:ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿ : ಗದಗ ಜಿಲ್ಲೆಯಿಂದ ಮೂವರು ಗಡಿಪಾರು
ಇದಕ್ಕೂ ಮುಂಚೆ ವೇಶ್ಯಾವಾಟಿಕೆಯಿಂದ ರಕ್ಷಣೆ ಮಾಡಿದ್ದ ಯುಪಿ ಯುವತಿಯನ್ನು ನಗರದ ಮಹಿಳಾ ರಕ್ಷಣಾ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿತ್ತು. ತದ ನಂತರ ಮಹಿಳಾ ರಕ್ಷಣಾ ಕೇಂದ್ರದ ಅಧಿಕಾರಿ ಸುರೇಖಾ ಪಾಟೀಲ ಯುವತಿಯರ ಪೂರ್ವಾಪರ ವಿಚಾರಿಸಿದಾಗ ಯುವತಿ ಉತ್ತರಪ್ರದೇಶದ ಗಾಜಿಯಾಬಾದ್‍ನವಳು ಎಂದು ತಿಳಿದು ಬಂದಿದೆ. ಆಕೆ 2017ರಲ್ಲಿ ಗಾಜಿಯಾಬಾದ್‍ನಿಂದ ನಾಪತ್ತೆಯಾಗಿದ್ದಳು.
ಬಳಿಕ ಮುಂಬೈ ಸೇರಿದಂತೆ ನಾನಾ ಕಡೆಗಳಲ್ಲಿ ಸುತ್ತಾಡಿ ಕೊನೆಗೆ ಬೆಳಗಾವಿಗೆ ಬಂದಿದ್ದಳು. ಬೆಳಗಾವಿಯಲ್ಲಿ ತಮ್ಮ ಮಗಳು ಇರುವ ಮಾಹಿತಿ ತಿಳಿಯುತ್ತಿದ್ದಂತೆ ಯುಪಿ ಪೊಲೀಸರೊಂದಿಗೆ ಆಕೆ ಪಾಲಕರು ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಬೆಳಗಾವಿ ಡಿಸಿಪಿ ಡಾ. ವಿಕ್ರಮ್ ಆಮ್ಟೆ ನೇತೃತ್ವದಲ್ಲಿ ಯುಪಿ ಪೊಲೀಸರು ಸಮ್ಮುಖದಲ್ಲಿ ಆ ಯುವತಿಯನ್ನು ಪಾಲಕರಿಗೆ ಹಸ್ತಾಂತರ ಮಾಡಲಾಗಿದೆ.