ಬೆಳಗಾವಿ: ಸ್ಥಳೀಯವಾಗಿ ಬಗೆಹರಿಯಬೇಕಿದ್ದ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರ ಕಲಹ ಬೆಂಗಳೂರಿಗೆ ಶಿಫ್ಟ್ ಆಗಿದೆ. ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ, ಸಚಿವ ಉಮೇಶ್ ಕತ್ತಿ ನೇತೃತ್ವದ ನಿಯೋಗ ಇಂದು ಮಧ್ಯಾಹ್ನ 2 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಲಿದೆ.
ಬೆಳ್ಳಂಬೆಳಗ್ಗೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿದ್ದಾರೆ. ಜಿಲ್ಲೆಯ ಹಲವು ನಾಯಕರು ಈಗಾಗಲೇ ಬೆಂಗಳೂರಿನಲ್ಲಿದ್ದಾರೆ. ಬೆಳಗಾವಿ ನಾಯಕರ ಭೇಟಿಗೆ ಸಿಎಂ ಸಮಯವನ್ನು ನೀಡಿದ್ದಾರೆ. ಸಿಎಂ ಕಾರ್ಯ ಕಲಾಪಗಳ ಪಟ್ಟಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಬಜೆಟ್‌ನಲ್ಲಿ ಬೆಳಗಾವಿ ಜಿಲ್ಲೆಗೆ ಅನುದಾನ ಸೇರಿ ಇತರ ಸಮಸ್ಯೆಗಳ ಕುರಿತು ಸಿಎಂ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ಶಾಸಕರು ಹೇಳುತ್ತಿದ್ದಾರೆ.

ಜಾರಕಿಹೊಳಿ ಬ್ರದರ್ಸ್ ವಿರುದ್ಧ ಸಿಎಂಗೆ ದೂರು ನೀಡುವ ಸಾಧ್ಯತೆಯೂ ಇದೆ. ಆದರೆ, ಸಿಎಂ ಭೇಟಿ ಕುರಿತು ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಮಹೇಶ್ ಕುಮಟಳ್ಳಿಗೆ ಆಹ್ವಾನ ನೀಡಲಾಗಿಲ್ಲ. ಬೆಂಗಳೂರಿನಲ್ಲಿರುವ ಶ್ರೀಮಂತ ಪಾಟೀಲ್ ಸಿಎಂ ಸಭೆಗೆ ಹೋಗುತ್ತಾರೋ? ಇಲ್ಲವೋ? ಎಂಬುದು ಗೊತ್ತಿಲ್ಲ. ಸಿಎಂ ಭೇಟಿ ಬಳಿಕ ಸಂಜೆ ಬಿಜೆಪಿ ಕಚೇರಿಯಲ್ಲಿ ಶಾಸಕರು ಕೆಲ ಬಿಜೆಪಿ ನಾಯಕರ ಜೊತೆಗೆ ಸಭೆ ನಡೆಸಲಿದ್ದಾರೆ.
ನಿನ್ನೆಯಷ್ಟೇ ಸ್ಥಳೀಯ ಮಟ್ಟದಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಬೆನ್ನಲ್ಲೇ ಸಚಿವ ಉಮೇಶ್ ಕತ್ತಿ ನೇತೃತ್ವ ನಿಯೋಗ ಇಂದು ಬೆಂಗಳೂರಿನಲ್ಲಿ ಸಿಎಂ ಭೇಟಿ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ