ಬೆಳಗಾವಿ: ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಹಿರೂರು ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಫಕೀರಪ್ಪ ಸಿದ್ದಪ್ಪ ಚಂದರಗಿ (54) ಹಾಗೂ ಮಹಾದೇವ ದುರ್ಗಪ್ಪ ಮೇತ್ರಿ (40) ಮೃತರು.
ಮೃತರಿಬ್ಬರು ಕಬ್ಬಿನಹೊಲದಲ್ಲಿ ಕೆಲಸ ಮಾಡುವಾಗ ಹರಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬಲಿಯಾಗಿದ್ದಾರೆ. ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ದುರ್ಘಟನೆಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀನುಗಾರ ಸಾವು: ದೂಧಗಂಗಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಿದ್ದರೂ ಅಪಾಯವನ್ನು ಲೆಕ್ಕಿಸದೇ ಮೀನು ಹಿಡಿಯಲು ಹೋಗಿದ್ದ ಮೀನುಗಾರನೊಬ್ಬ ದೂಧಗಂಗಾ ನದಿಯ ಹಿನ್ನೀರಿನಲ್ಲಿ ಮೃತಪಟ್ಟ ಘಟನೆ ಮಂಗೂರ ಗ್ರಾಮದಲ್ಲಿ ನಡೆದಿದೆ. ನಿಪ್ಪಾಣಿ ತಾಲೂಕಿನ ಮಂಗೂರ ಗ್ರಾಮದ ನಿವಾಸಿ ಶಿವಾಜಿ ಕೊರವಿ (54) ಮೃತ ದುರ್ದೈವಿ.
ಇಂದು ಬೆಳಗಿನಜಾವ ದೂಧಗಂಗಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾನೆ. ಇತ್ತ ನೀರು ಪಾಲಾಗಿದ್ದ ಶಿವಾಜಿ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಸದ್ಯ ಮೃತದೇಹವನ್ನು ಪತ್ತೆಯಾಗಿದ್ದು ಹೊರಗೆ ತೆಗೆದಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.