ಬೆಳಗಾವಿ : ಹಿಂಡಲಗಾದಲ್ಲಿ ಪೂರ್ಣಗೊಂಡಿರುವ 108 ಕಾಮಗಾರಿಗಳ ಪೈಕಿ ಕೆಲವು ಕಾಮಗಾರಿಗಳಿಗೆ ನಾವೂ ದುಡ್ಡು ಹಾಕಿದ್ದೇವೆ. ಗುತ್ತಿಗೆದಾರ ಸಂತೋಷ ಪಾಟೀಲ್ ಹಾಗೂ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳ್ಕರ್ ಹೇಳಿದಂತೆ ನಾವು ಕೆಲಸ ಮಾಡಿದ್ದೇವೆ. ತುಂಡು ಗುತ್ತಿಗೆದಾರರು ಯಾರೂ ಈಶ್ವರಪ್ಪ ಅವರನ್ನ ಭೇಟಿಯಾಗಿಲ್ಲ ಎಂದು ತುಂಡು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ರಾಜು ಜಾಧವ್ ಹೇಳಿದ್ದಾರೆ.
ಗೋಕಾಕ್‌ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ ಮತ್ತು ಸಂತೋಷ ನಮಗೆ ಕೆಲಸ ಮಾಡಿ ಅಂತಾ ಹೇಳಿದ್ದರು. ಅದರಂತೆ ನಾವು ಕೆಲಸ ಮಾಡಿದ್ದೇವೆ. ನಾವು ವರ್ಕ್ ಆರ್ಡರ್ ಕೇಳಿದಾಗ ನನ್ನ ಬಳಿ ವರ್ಕ್ ಆರ್ಡರ್ ಇದೆ. ಅದರ ಬಗ್ಗೆ ನೀವು ಕಾಳಜಿ ಮಾಡಬೇಡಿ. ಕೆಲಸಗಳನ್ನು ಪೂರ್ಣಗೊಳಿಸಿ ಎಂದು ಹೇಳಿದ್ದರು. ನಾವು ಕೆಲಸ ಮಾಡಿದ್ದೇವೆ ಅಷ್ಟೇ.. ತುಂಡು ಗುತ್ತಿಗೆದಾರರು ಯಾರೂ ಈಶ್ವರಪ್ಪ ಅವರನ್ನ ಭೇಟಿಯಾಗಿಲ್ಲ ಎಂದು ರಾಜು ಜಾಧವ್ ಹೇಳಿದ್ದಾರೆ.
ನಾನು ಒಬ್ಬನೇ 27 ಲಕ್ಷ ರೂಪಾಯಿ ಕಾಮಗಾರಿ ಮಾಡಿದ್ದೇನೆ. ನನ್ನ ಜತೆಗೆ ಹನ್ನೆರಡು ಜನ ತಮ್ಮ ಸ್ವಂತ ಹಣ ಹಾಕಿ ಕಾಮಗಾರಿ ಮಾಡಿದ್ದಾರೆ. ನಾವು ಹಣ ಹಾಕಿ ಕೆಲಸ ಮಾಡಿದ್ದಕ್ಕೇ ಸಂತೋಷ ಹಣ ಹಾಕಿರುವುದಾಗಿ ಹೇಳಿರಬಹುದು ಎಂದು ರಾಜು ಜಾಧವ್ ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಗಲಭೆ ನಡೆಸಲು ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿತ್ತು : ಗೃಹ ಸಚಿವ ಆರಗ ಆರೋಪ
ಇದಕ್ಕೂ ಮುಂಚೆ ಗೋಕಾಕ್‌ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನ ಗೌಪ್ಯವಾಗಿ ಅವರು ಭೇಟಿಯಾಗಿದ್ದರು. ಹಿಂಡಲಗಾ ಗ್ರಾಮದಲ್ಲಿ ಸಂತೋಷ ಕಡೆಯಿಂದ ತುಂಡು ಗುತ್ತಿಗೆದಾರಿಕೆ ಪಡೆದಿದ್ದ 12 ಜನ ತುಂಡು ಗುತ್ತಿಗೆದಾರರು, ರಮೇಶ ಜಾರಕಿಹೊಳಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.