ಬೆಳಗಾವಿ: ದಿಂಗಾಲೇಶ್ವರ ಸ್ವಾಮೀಜಿ ನಡೆಸುತ್ತಿರುವ ಸತ್ಯದರ್ಶನ ಸಭೆಗೆ ಪ್ರತಿಯಾಗಿ ಸಭೆ ನಡೆಸಲು ಘಟಪ್ರಭಾದ ಗುಬ್ಬಲಗುದ್ದ ಕೆಂಪಯ್ಯ ಮಠದ ಮಲ್ಲಿಕಾರ್ಜುನ ದೇವರು ಮೂರು ಸಾವಿರಕ್ಕೂ ಅಧಿಕ ಭಕ್ತರೊಂದಿಗೆ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಿ ವಿಚಾರವಾಗಿ ಮಠದ ಹೊರಗಡೆ ದಿಂಗಾಲೇಶ್ವರ ಸ್ವಾಮೀಜಿ ಸಭೆ ನಡೆಸಿದ್ದಾರೆ. ಈ ಸಭೆಗೆ ಪ್ರತಿಯಾಗಿ ಮಲ್ಲಿಕಾರ್ಜುನ ದೇವರು ಭಕ್ತರ ಸಭೆ ನಡೆಸಿ ದಿಂಗಾಲೇಶ್ವರ ಸ್ವಾಮೀಜಿ ಎದುರು ತಮ್ಮ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ.
1998ರಲ್ಲಿ ಲಿಂಗೈಕ್ಯ ಮೂಜುಗು ಅವರು ಮಲ್ಲಿಕಾರ್ಜುನ ದೇವರನ್ನು ಮೂರು ಸಾವಿರ ಮಠದ ಉತ್ತರಾಧಿಕಾರಿ ಎಂದು ನೇಮಿಸಿದ್ದರು. ಮಠದಲ್ಲಿ ಈಗಿರುವ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಲಹೆ ಮೇರೆಗೆ ಮೂರುಸಾವಿರ ಮಠಕ್ಕೆ ಹೋಗದೇ ಮೂರುಸಾವಿರ ಮಠದ ಶಾಖಾಮಠವಾದ ಘಟಪ್ರಭಾದ ಕೆಂಪಯ್ಯ ಮಠವನ್ನು ಮಲ್ಲಿಕಾರ್ಜುನ ದೇವರು ಮುನ್ನಡೆಸುತ್ತಿದ್ದಾರೆ.
ಸತ್ಯದರ್ಶನ ಹಿನ್ನೆಲೆ 30 ಕ್ಕೂ ಹೆಚ್ಚು ಬಸ್ ಹಾಗೂ ಸ್ವಂತ ವಾಹನಗಳ ಮೂಲಕ ಭಕ್ತರು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದಾರೆ. ಹುಬ್ಬಳ್ಳಿ ಚೆನ್ನಮ್ಮ ವೃತ್ತದಿಂದ ಮೂರು ಸಾವಿರ ಮಠದ ಸ್ವಾಮೀಜಿ ಹಾಗೂ ಭಕ್ತರು ಪಾದಯಾತ್ರೆ ನಡೆಸಲಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ದೇವರು, ನಾವು ನಮ್ಮ ಭಕ್ತರು ಹುಬ್ಬಳ್ಳಿ ಮಠದ ಗದ್ದುಗೆ ದರ್ಶನ ಪಡೆಯಲು ಹೊರಟಿದ್ದೇವೆ. ಸತ್ಯ ದರ್ಶನ ಸಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ನಾವು ಪ್ರತ್ಯೇಕವಾಗಿ ನಮ್ಮ ಭಕ್ತರ ಜೊತೆ ಗುರುಗಳನ್ನ ಭೇಟಿ ಮಾಡುತ್ತೇವೆ. ಮೂರು ಸಾವಿರ ಮಠದ ಶಾಂತಿ ಕದಲುವ ವ್ಯಕ್ತಿ ನಾನಲ್ಲ. ನಾವು ಶಕ್ತಿ ಪ್ರದರ್ಶನ ಮಾಡಲು ಹೊರಟಿಲ್ಲ, ನಾವು ಭಕ್ತಿ ಪ್ರದರ್ಶನ ಮಾಡಲು ಹೊರಟಿದ್ದೇವೆ ಎಂದರು.
ನಾನು ಈಗಾಗಲೇ ಮೂರುಸಾವಿರ ಮಠದ ಉತ್ತರಾಧಿಕಾರಿ ಆಗಿರುವೆ. ಬೇರೆ ಯಾರನ್ನೂ ಉತ್ತರಾಧಿಕಾರಿಯನ್ನಾಗಿ ಮಾಡುವ ಅವಶ್ಯಕತೆ ಇಲ್ಲ. ಜೊತೆಗೆ ಈಗಿರುವ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ ಮಠದ ಪೀಠಾಧಿಪತಿಯಾಗಿ ಮುಂದುವರೆಯಬೇಕು. ಸುಳ್ಳಿಗೆ ಪ್ರಚಾರ ಸಿಗುತ್ತಿದೆ. ಆದರೆ, ಅದಕ್ಕೆ ಅಸ್ತಿತ್ವ ಇಲ್ಲ. ಸತ್ಯಕ್ಕೆ ಪ್ರಚಾರ ಸಿಗದೆ ಇರಬಹುದು. ಆದರೆ, ಅದಕ್ಕೆ ಅಸ್ತಿತ್ವ ಇದೆ. ಹಾಗಾಗಿ ನಾವು ಸತ್ಯದ ಪರವಾಗಿ ಇದ್ದೇವೆ ಎಂದು ದಿಂಗಾಲೇಶ್ವರ ಸ್ವಾಮೀಜಿಗೆ ತಿರುಗೇಟು ಕೊಟ್ಟರು.