ಬೆಳಗಾವಿ: ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಲಂಡನ್‌ನಿಂದ ಬೆಳಗಾವಿಗೆ ಬಂದಿರುವ ಮಹಿಳೆಯ ಟ್ರಾವೆಲ್ ಹಿಸ್ಟರಿ ಕೂಡ ಬೆಚ್ಚಿಬೀಳಿಸುವಂತಿದ್ದು, ಮಹಿಳೆಯ ಆಗಮನ ಬೆಳಗಾವಿ ಅಷ್ಟೇ ಅಲ್ಲ ನೆರೆಯ ಬಾಗಲಕೋಟೆ ಜನರನ್ನೂ ಆತಂಕಕ್ಕೆ ದೂಡಿದೆ.
ಲಂಡನ್‌ನಲ್ಲಿ ಪತಿ ಜೊತೆ ನೆಲೆಸಿರುವ ಬೆಳಗಾವಿ ಮೂಲದ 35 ವರ್ಷದ ಮಹಿಳೆ ಡಿಸೆಂಬರ್ 14ರಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಬಳಿಕ ಅಲ್ಲಿಂದ ಕಾರಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ತೆರಳಿದ್ದರು. ಬೆಳಗಾವಿ ಮಹಿಳೆಯ ತವರು ಮನೆಯಾದ್ರೆ, ಬಾಗಲಕೋಟೆ ಜಿಲ್ಲೆ ಜಮಖಂಡಿ ಗಂಡನ ಮನೆ. ಡಿಸೆಂಬರ್ 15ರಿಂದ ಡಿಸೆಂಬರ್ 21ರವರೆಗೆ ಜಮಖಂಡಿಯಲ್ಲಿರುವ ಪತಿಯ ಮನೆಯಲ್ಲಿ ಮಹಿಳೆ ವಾಸವಿದ್ದರು. ನಿನ್ನೆ ಮಧ್ಯಾಹ್ನ ಜಮಖಂಡಿಯಿಂದ ಕಾರಿನ ಮೂಲಕ ಬೆಳಗಾವಿಗೆ ಬಂದಿದ್ದರು.
ಇದನ್ನೂ ಓದಿ : ಯುಕೆಯಲ್ಲಿ ಕೊರೊನಾದ ಹೊಸ ಅಲೆ ಹಿನ್ನೆಲೆ: ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ
ಬೆಳಗಾವಿಗೆ ಆಗಮಿಸಿದ ಮಹಿಳೆಗೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಕರೆ ಮಾಡಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಿದ್ದರು. ಅಧಿಕಾರಿಗಳ ಸೂಚನೆ ಮೇರೆಗೆ ವಡಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಮಹಿಳೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ವರದಿ ಬರುವ ನಿರೀಕ್ಷೆಯಿದೆ. ಮುಂಜಾಗ್ರತಾ ಕ್ರಮವಾಗಿ ಮಹಿಳೆ ಜೊತೆ ತಾಯಿ, ಸಹೋದರಿಗೆ ಹೋಮ್ ಐಸೋಲೇಷನ್ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯ ಕೋವಿಡ್ ವರದಿಗೆ ಕಾಯುತ್ತಿದ್ದಾರೆ. ಮಹಿಳೆಯ ಪತಿ ಲಂಡನ್‌ನ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದಾರೆ. ಪತಿ ಹಾಗೂ ಮಕ್ಕಳು ಸದ್ಯ ಲಂಡನ್‌ನಲ್ಲೇ ಇದ್ದಾರೆ.