ಬೆಳಗಾವಿ : ವಿದ್ಯಾರ್ಥಿಗಳಿಗಾಗಿ ತರಬೇತಿ ಕೇಂದ್ರದಲ್ಲಿ ಕೌಶಲ್ಯ ಆಧಾರಿತ ಹಲವು ಕೋರ್ಸ್ಗಳು ಲಭ್ಯವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಾತಿ ಪಡೆಯುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಅಶ್ವತ್ಥನಾರಾಯಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಆನ್ಲೈನ್ ಮುಖಾಂತರ ಇಂದು ನಗರದ ಸರ್ಕಾರಿ ಉಪಕರಣಾಗಾರ ಘಟಕ ಮತ್ತು ತರಬೇತಿ ಕೇಂದ್ರದ (ಜಿ.ಟಿ.ಟಿ.ಸಿ) ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಫೌಂಡ್ರಿ ಉದ್ಯೋಗ ಈಗಾಗಲೇ ಚಾಲನೆಯಲ್ಲಿದೆ. ಮುಂದಿನ ದಿನಗಳಲ್ಲಿ ಇದು ಬೆಳಗಾವಿಯಲ್ಲಿನ ಕೈಗಾರಿಕರಣದ ಸುವರ್ಣಯುಗ ಪ್ರಾರಂಭವಾಗಲು ಅನೂಕುಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ವಿದ್ಯಾರ್ಥಿಗಳ ಶಿಕ್ಷಣದ ಅನೂಕೂಲಕ್ಕಾಗಿ 10 ಕೋಟಿ ಅನುದಾನ ನೀಡಿದ್ದಕ್ಕಾಗಿ ಶಾಸಕ ಅಭಯ್ ಪಾಟೀಲ್ ಅವರನ್ನು ಸರ್ಕಾರದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಅಭಯ್ ಪಾಟೀಲ್ ಮಾತನಾಡಿ, ಅಶ್ವತ್ಥನಾರಾಯಣ ಅವರು ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಕೋರ್ಸ್ಅನ್ನು ಪ್ರಾರಂಭಿಸಲು ಅವಕಾಶ ನೀಡಿದ್ದಕ್ಕೆ ನನ್ನ ಹಾಗೂ ಬೆಳಗಾವಿಯ ಜಿ.ಟಿ.ಟಿ.ಸಿ ಸಂಸ್ಥೆ ಪರವಾಗಿ ಅಭಿನಂದನೆ ಕೋರುವುದಾಗಿ ತಿಳಿಸಿದರು. ಬೆಳಗಾವಿಯನ್ನು ಐಟಿ-ಬಿಟಿ ಕ್ಷೇತ್ರವನ್ನಾಗಿ ಮಾಡಲು ಈಗಾಗಲೇ ಎಲ್ಲ ಪ್ರಯತ್ನ ನಡೆದಿದ್ದು, ಬೆಂಗಳೂರು ನಗರಕ್ಕೆ ಸಮಾಂತರವಾಗಿ ನಿಲ್ಲುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.