ಚಿಕ್ಕೋಡಿ: ಕಾರು ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಬ್ಬಿನಡಿ ಸಿಲುಕಿಕೊಂಡಿದ್ದ ಚಾಲಕನ ರಕ್ಷಣೆ ಮಾಡಲಾಗಿದೆ.
ಟ್ರ್ಯಾಕ್ಟರ್ ಚಾಲಕ ಕುಮಾರ ಹುಕ್ಕೇರಿ ಕಬ್ಬಿನಡಿ ಸಿಲುಕಿದ್ದ, ತಕ್ಷಣವೇ ಸ್ಥಳೀಯರ ಸಹಾಯದಿಂದ ಆತನನ್ನು ರಕ್ಷಿಸಲಾಗಿದೆ. ನಾಲ್ಕು ಜೆಸಿಬಿ, ಒಂದು ಹಿಟಾಚಿ ಬಳಸಿ ಟ್ರ್ಯಾಕ್ಟರ್ ಮೇಲೆತ್ತಲಾಗಿದೆ. ಇನ್ನೋವಾ ಕಾರಿನಲ್ಲಿದ್ದ ಪ್ರಯಾಣಿಕರು ಮೈಸೂರು ಮೂಲದವರು ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದವರು ಸವದತ್ತಿ ಯಲ್ಲಮ್ಮ ದೇವಿ ದರ್ಶನ ಮುಗಿಸಿ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನಲ್ಲಿ ಏಳು ಜನ ಪ್ರಯಾಣಿಕರು ಇದ್ದು, ಅವರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸ್ಥಳೀಯ ಗೋಕಾಕ್ ಚಿಕ್ಕೋಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗಿದೆ. ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ವಿಜಯಪುರದಲ್ಲಿ ಅಪಘಾತ ಓರ್ವ ಸಾವು: ಬೈಕ್ ಮತ್ತು ಹೆಚ್‌ಪಿ ಟ್ಯಾಂಕರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ಬಳಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟಿರುವ ಬೈಕ್ ಸವಾರನ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ. ಅಪಘಾತದ ಬಳಿಕ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಡಬದಲ್ಲಿ ಕಾರುಗಳ ನಡುವೆ ಅಪಘಾತ: ಓಮಿನಿ ಕಾರು ಹಾಗೂ ಕಾರಿನ ನಡುವೆ ಅಪಘಾತ ನಡೆದು ಓರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಶನಿವಾರ ನಡೆದಿದೆ. ಮರ್ಧಾಳ ಸಮೀಪದ ಅಳೇರಿ ಎಂಬ ತಿರುವಿನಲ್ಲಿ ಓಮಿನಿ ಕಾರು ಸುಬ್ರಹ್ಮಣ್ಯ ಕಡೆಗೆ ಹಾಗೂ ವಿರುದ್ಧ ದಿಕ್ಕಿನಿಂದ ಕಾರು ಬರುತ್ತಿತ್ತು ಈ ವೇಳೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಂಭೀರ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಗ್ಯಾಸ್ ಗೀಸರ್ ಸೋರಿಕೆಯಾಗಿ ಗರ್ಭಿಣಿ ಸಾವು, ಮಗು ಸ್ಥಿತಿ ಗಂಭೀರ
ಇತ್ತೀಚೆಗಿನ ಪ್ರಕರಣ: ಡಿಸೆಂಬರ್ 20 ರ ತಡರಾತ್ರಿ ಅಫಜಲಪುರ ಪಟ್ಟಣದ ಹೊರವಲಯದ ನೀರಾವರಿ ಕಚೇರಿ ಬಳಿ ಲಾರಿ ಹಾಗೂ ಜೀಪ್ ಮಧ್ಯೆ ಭೀಕರ ರಸ್ತೆ ಅಪಘಾತದ ಸಂಭವಿಸಿ ಸ್ಥಳದಲ್ಲಿಯೇ 5 ವರ್ಷದ ಮಗು ಸೇರಿ ನಾಲ್ವರು ಸಾವನ್ನಪ್ಪಿದ್ದರು.