ಬೆಳಗಾವಿ : ಲಾಕ್ಡೌನ್ ತೆರವಾದ್ರೂ ಕೂಡ ಕೊರೊನಾ ವೈರಸ್ ಭೀತಿಯಿಂದಾಗಿ ಉದ್ಯಾನವನಗಳತ್ತ ಪ್ರವಾಸಿಗರು ಆಗಮಿಸ್ತಿಲ್ಲ. ಹಾಗಾಗಿ ಪಾರ್ಕ್‌ಗಳೆಲ್ಲವೂ ಈಗ ಬಿಕೋ ಎನ್ನುತ್ತಿವೆ.
ನಗರದ ಹೊರವಲಯದಲ್ಲಿರುವ ಭೂತರಾಮನಟ್ಟಿಯ ಕಿತ್ತೂರ ರಾಣಿ ಚೆನ್ನಮ್ಮ ಕಿರು ಪ್ರಾಣಿ ಸಂಗ್ರಹಾಲಯ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿ. ಈ ಉದ್ಯಾನವನ ನಿತ್ಯವೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಆದರೀಗ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಉದ್ಯಾನವನದಲ್ಲಿ ಮೊಸಳೆ, ಜಿಂಕೆ, ಕೃಷ್ಣಮೃಗ, ಕಾಡುಕೋಣ, ನವಿಲು, ಉಷ್ಟ್ರಪಕ್ಷಿ, ಆಮೆ ಸೇರಿ ಇಪ್ಪತ್ತಕ್ಕೂ ಅಧಿಕ ಬಗೆಯ ಪ್ರಾಣಿ ಹಾಗೂ ಪಕ್ಷಿಗಳಿವೆ. ಸುತ್ತಲು ದಟ್ಟ ಅರಣ್ಯ ಪ್ರದೇಶ ಇರುವುದರಿಂದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಎರಡು ಹುಲಿ ಹಾಗೂ ಸಿಂಹಗಳನ್ನೂ ತರುವ ಯೋಜನೆಗೆ ಚಾಲನೆ ನೀಡಿದ್ದರು. ಆದರೆ, ಲಾಕ್ಡೌನ್ ಹಿನ್ನೆಲೆ ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ ಎನ್ನಲಾಗಿದೆ.
ಚಿಕ್ಕಮಕ್ಕಳು ಹಾಗೂ ವಯೋವೃದ್ಧರಿಗೆ ಉದ್ಯಾನವನದಲ್ಲಿ ಪ್ರವೇಶ ನಿಷೇಧ ಹೇರಿರುವುದರಿಂದ ಜನರು ಉದ್ಯಾನವನಗಳತ್ತ ಮುಖ ಮಾಡುತ್ತಿಲ್ಲ ಎನ್ನಲಾಗುತ್ತಿದೆ.