ಬೆಳಗಾವಿ: ರಾಜ್ಯದೆಲ್ಲೆಡೆ ಟೊಮೆಟೊ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಬೆಳಗಾವಿ ಜಿಲ್ಲೆಯಲ್ಲೂ ಟೊಮೆಟೊ ಮತ್ತು ಮೆಣಸಿನಕಾಯಿ ಬೆಲೆ ನೂರರ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.
ಒಂದೆಡೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಮಳೆರಾಯನ ಆಗಮನಕ್ಕಾಗಿ ರೈತರು ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ. ಮತ್ತೊಂದೆಡೆ ಟೊಮೆಟೋ, ಮೆಣಸಿನಕಾಯಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರನ್ನು ಚಿಂತೆಗೀಡು ಮಾಡಿದೆ. ಜುಲೈ ತಿಂಗಳ ಮೊದಲ ವಾರ ಮುಗಿಯುತ್ತ ಬಂದರೂ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಕೊರತೆ ಹಿನ್ನೆಲೆ ಬಹುತೇಕ ರೈತರು ಬಿತ್ತನೆ ಮಾಡದೇ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.
ಇದಕ್ಕೂ ಮೊದಲು ಬೆಳೆದಿದ್ದ ಟೊಮೆಟೋ, ಮೆಣಸಿನಕಾಯಿ ಸೇರಿ ಇತರೆ ತರಕಾರಿ ಬೆಳೆಗಳು ಸಮರ್ಪಕ ಮಳೆಯಾಗದೇ ಇರುವುದರಿಂದ ಇಳುವರಿ ಕಡಿಮೆಯಾಗಿದೆ. ಪರಿಣಾಮ ಟೊಮೆಟೋ ಮತ್ತು ಹಸಿ ಮೆಣಸಿನಕಾಯಿ ಬೆಲೆ ಏರಿಕೆಯಾಗಿದೆ. ಟೊಮೆಟೊ ಹಾಗೂ ಮೆಣಸಿನಕಾಯಿ ಪ್ರತಿ ಕೆಜಿಗೆ ನೂರು ರೂಪಾಯಿಯಂತೆ ಮಾರಾಟವಾಗುತ್ತಿದೆ. ಟೊಮೆಟೋ ಮತ್ತು ಮೆಣಸಿನಕಾಯಿ ಅಗತ್ಯಕ್ಕಿಂತ ಕಡಿಮೆ ಉತ್ಪನ್ನ ಮಾರುಕಟ್ಟೆಗೆ ಬಂದಿರುವುದರಿಂದ ಬೆಲೆ ಏರಿಕೆ ಉಂಟಾಗಿದೆ.
''ಬೆಲೆ ಏರಿಕೆಯಿಂದ ಬಡ ಜನರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಕಾಂಗ್ರೆಸ್ ಪಕ್ಷದ ಮೇಲೆ ನಾವು ಭರವಸೆ ಇರಿಸಿದ್ದೆವು. ಮಹಿಳೆಯರಿಗೆ 2 ಸಾವಿರ ರೂ. ಕೊಡುವುದು ಮತ್ತು ಉಚಿತ ವಿದ್ಯುತ್ ಕೊಡುವುದಕ್ಕಿಂತ ಮೊದಲು ಸರ್ಕಾರ ಅವಶ್ಯಕ ವಸ್ತುಗಳ ಬೆಲೆ ಕಡಿಮೆ ಮಾಡಬೇಕು'' ಎಂದು ಗ್ರಾಹಕ ಮೆಹಬೂಬ್ ತಹಶೀಲ್ದಾರ್ ಒತ್ತಾಯಿಸಿದರು.
''ಟೊಮೆಟೋ, ಮೆಣಸಿನಕಾಯಿ ಬೆಲೆ ನೂರು ರೂಪಾಯಿ ಆಗಿದೆ. ಪ್ರತಿದಿನ 200ರಿಂದ 300 ರೂ. ತರಕಾರಿ ಖರೀದಿಸಲು ನಾವು ಖರ್ಚು ಮಾಡಿದರೆ ಇನ್ನುಳಿದ ಮನೆ ಖರ್ಚುಗಳಿಗೆ ಏನು ಮಾಡುವುದು. ಶ್ರೀಮಂತ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟುವುದಿಲ್ಲ. ಆದರೆ ಸಾಮಾನ್ಯ ಜನರಿಗೆ ತೊಂದರೆ ಆಗುತ್ತದೆ. ಹೀಗಾಗಿ ತುರ್ತಾಗಿ ಅವಶ್ಯಕ ವಸ್ತುಗಳ ಬೆಲೆಯನ್ನು ಸರ್ಕಾರ ಇಳಿಸಬೇಕು ಎಂದು ಗೃಹಿಣಿ ಅಕ್ಷತಾ ದೇಸಾಯಿ ಆಗ್ರಹಿಸಿದರು.
''ಕಳೆದ ಒಂದು ವಾರದ ಹಿಂದೆ ಮೆಣಸಿನಕಾಯಿ ಕೆಜಿಗೆ 30 ರಿಂದ 40 ರೂ. ಮಾರಾಟ ಮಾಡುತ್ತಿದ್ದೆವು. ಆದರೆ ಈಗ ನೂರು ರೂಪಾಯಿ ಆಗಿದೆ. ಮಳೆ ಆಗದೇ ಇರುವುದರಿಂದ ಬೆಳೆ ಕಡಿಮೆಯಾಗಿ ಏಕಾಏಕಿ ಬೆಲೆ ಹೆಚ್ಚಾಗಿದೆ. ಜನರು ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತರಕಾರಿ ವ್ಯಾಪಾರಿ ಬಸವರಾಜ ಕರಗುಪ್ಪಿ ಹೇಳಿದರು.
''ಹೋಲ್ ಸೇಲ್ ನಲ್ಲಿ ಉತ್ಪನ್ನ ಕಡಿಮೆ ಇರುವುದರಿಂದ ಎರಡು ಸಾವಿರ ರೂಪಾಯಿಗೆ ಒಂದು ಟ್ರೇ ಟೊಮೆಟೋ ಮಾರಾಟ ಆಗುತ್ತಿದೆ. ದೊಡ್ಡ ಟೊಮೆಟೋ ನೂರು ರೂ., ಸಣ್ಣ ಟೊಮೆಟೋ 80 ರೂ. ಮಾರಾಟ ಮಾಡುತ್ತಿದ್ದೇವೆ. ಹೀಗಾಗಿ ವ್ಯಾಪಾರ ಕಡಿಮೆಯಿದೆ. ಒಂದು ಕೆಜಿ ತಗೊಳ್ಳುವವರು ಅರ್ಧ ಕೆಜಿ, ಎರಡು ಕೆಜಿ ತೆಗೆದುಕೊಳ್ಳುವವರು ಒಂದು ಕೆಜಿ ತೆಗೆದುಕೊಳ್ಳುತ್ತಿದ್ದಾರೆ ಎಂದು ತರಕಾರಿ ವ್ಯಾಪಾರಿ ಪ್ರಕಾಶ ಬಡುಗೋಳ ಹೇಳಿದರು. ಇನ್ನು ಬದನೆಕಾಯಿ, ಬೀನ್ಸ್, ಬೆಂಡೆಕಾಯಿ ಸೇರಿ ಇನ್ನಿತರ ತರಕಾರಿ ಬೆಳೆಗಳ ಬೆಲೆಯಲ್ಲೂ ಶೇ. 20ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ : Tomato price : ಸೇಬಿಗಿಂತ ದುಬಾರಿಯಾದ ಟೊಮೆಟೊ !