ಬೆಳಗಾವಿ (ಬೆಂಗಳೂರು): ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲಿಯೂ ಲವ್ ಜಿಹಾದ್ ತಡೆಗೆ ವಿಶೇಷ ಕಾನೂನು ತರುವ ಅಗತ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು. ಮತಾಂತರ ನಿಷೇಧ ಕಾಯ್ದೆಯಲ್ಲಿ ಈ ವಿಷಯವನ್ನು ಸೇರಿಸುವ ಚಿಂತನೆ ಇದ್ದಲ್ಲಿ ಆದಷ್ಟು ಬೇಗ ಕ್ರಮವಾಗಲಿ ಎಂದು ವಿಧಾನ ಪರಿಷತ್ನ ಸದಸ್ಯ ಡಿ ಎಸ್ ಅರುಣ್ ಸರ್ಕಾರಕ್ಕೆ ಮನವಿ ಮಾಡಿದರು.
ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅರುಣ್, ಲವ್ ಜಿಹಾದ್ ಎನ್ನುವುದನ್ನು ಇಷ್ಟು ದಿನ ಬೇರೆ ರಾಜ್ಯದಲ್ಲಿ ವರದಿಯಾಗುತ್ತಿದ್ದದುನ್ನು ನೋಡುತ್ತಿದ್ದೆವು. ಆದರೆ ಇದೀಗ ನಮ್ಮ ರಾಜ್ಯದಲ್ಲಿಯೂ ಘಟನೆಗಳು ನಡೆದಿರುವ ಕುರಿತು ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಮಂಗಳೂರು, ಉಡುಪಿ, ಶಿವಮೊಗ್ಗ ಹಾಗು ಬೆಂಗಳೂರಿನಲ್ಲಿ ಇಂಥ ಘಟನೆಗಳೂ ನಡೆಯುತ್ತಿವೆ. ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಮತಾಂತರ ಮಾಡಲಾಗುತ್ತಿದೆ. ಇದರ ತಡೆಗೆ ಉತ್ತರ ಪ್ರದೇಶದಲ್ಲಿ ಜಾರಿ ಮಾಡಿರುವಂತೆ ನಮ್ಮಲ್ಲಿಯೂ ಕಾನೂನು ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದಲೂ ಕೇಳಿ ಬರುತ್ತಿದೆ ಎಂದು ಹೇಳಿದರು. ಅರುಣ್ ಅವರ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಂದ ಉತ್ತರ ಕೊಡಿಸುವುದಾಗಿ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಇದನ್ನೂ ಓದಿ:ಪ್ರಚಾರಕ್ಕೆ ಕಾರು ಪಡೆದು ವಾಪಸ್ ನೀಡದೇ ಧಮ್ಕಿ ಹಾಕಿದ ಆರೋಪ: ನಲಪಾಡ್ ವಿರುದ್ಧ ದೂರು