ಬೆಂಗಳೂರು: ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟರ್ ನಂಬರ್ ಪ್ಲೇಟ್ (HSRP) ಕಡ್ಡಾಯಗೊಳಿಸಲಾಗಿದ್ದು, ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಯಿಸಲು 2024ರ ಫೆಬ್ರವರಿವರಿಗೆ ಕಾಲಾವಕಾಶ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆ ಶಾಸಕ ಯಶವಂತ ರಾಯಗೌಡ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, "ಕೇಂದ್ರ ಸರ್ಕಾರದ ಆದೇಶದ ಅನುಸಾರ ರಾಜ್ಯದಲ್ಲಿ 1-04-19 ನಂತರ ಮಾರಾಟವಾಗುವ ಎಲ್ಲ ವಾಹನಗಳಿಗೂ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಕಡ್ಡಾಯವಾಗಿದ್ದು, ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಯಿಸಲು ಮುಂದಿನ ಫೆ.17 ರವರೆಗೆ ಕಾಲಾವಕಾಶ ನೀಡಲಾಗಿದೆ" ಎಂದರು.
ಹೆಚ್.ಎಸ್.ಆರ್.ಪಿ ಅಥವಾ ಹೈ ಸೆಕ್ಯುರಿಟಿ ರಿಜಿಸ್ಟರ್ ಪ್ಲೇಟ್ ಟ್ಯಾಮ್ ಪರ್ ಪ್ರೂಫ್ ಮತ್ತು ಮರುಬಳಕೆ ಮಾಡಲಾಗದ ಲಾಕ್‌ಗಳನ್ನು ಹೊಂದಿರುವ ನಂಬರ್ ಪ್ಲೇಟ್‌ನ ಹೊಸ ರೂಪವಾಗಿದೆ. ಒಮ್ಮೆ ನಂಬರ್ ಪ್ಲೇಟ್ ಅನ್ನು ಅಳವಡಿಸಿದರೆ, ಅದನ್ನು ಸುಲಭವಾಗಿ ತೆಗೆದುಹಾಕಲು ಸಾಧ್ಯವಾಗುವುದಿಲ್ಲ. ನಂಬರ್ ಪ್ಲೇಟ್ ಅನ್ನು ಬದಲಾಯಿಸಲು ಪ್ರಯತ್ನಿಸಿದಲ್ಲಿ ಅದು ನಾಶವಾಗುತ್ತದೆ. ಹೆಚ್ಎಸ್ಆರ್ಪಿ ಪ್ಲೇಟ್‌ಗಳು ಒಂದೇ ರೀತಿಯ ಫಾಂಟ್ ಮತ್ತು ವಿನ್ಯಾಸವನ್ನು ಹೊಂದಿರುತ್ತದೆ. ಮತ್ತು ನಂಬರ್ ಪ್ಲೇಟ್ ಎಡಭಾಗದಲ್ಲಿ ನೀಲಿ ಬಣ್ಣದ ಚಕ್ರವನ್ನು ಹೊಂದಿರುತ್ತದೆ. ಪ್ಲೇಟ್‌ನ ಉಳಿದ ಭಾಗದಲ್ಲಿ ಬಣ್ಣದ ಬಗ್ಗೆ ವಾಹನ ವರ್ಗದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಉದಾಹರಣೆಗೆ ಖಾಸಗಿ ವಾಹನಗಳಿಗೆ ಬಣ್ಣದ ಹಿನ್ನೆಲೆಯಲ್ಲಿ ಕಪ್ಪು ಬಣ್ಣದ ಸಂಖ್ಯೆಗಳಿರುತ್ತವೆ. ನಂಬರ್ ಪ್ಲೇಟ್‌ನಲ್ಲಿ "ಇಂಡಿಯಾ" ಎಂಬ ಹಾಟ್ ಸ್ಟ್ಯಾಂಪ್ ಕೂಡ ಅಳವಡಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ದೋಷ ಪೂರಿತ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ವಿರುದ್ಧ ಒಟ್ಟು 71,796 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಮುಂದಿನ ಕಾಲಾವಕಾಶದವರೆಗೆ ದಂಡ ವಿಧಿಸದಂತೆ ಪೊಲೀಸರಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ನೀಡಿದ್ದಾರೆ. ಸಾರಿಗೆ ಇಲಾಖೆಯು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ಗಳಿಗೆ ದರ ನಿಗದಿ ಮಾಡಿರುವುದಿಲ್ಲ, ಸದರಿ ದರವನ್ನು ಹೆಚ್.ಎಸ್.ಆರ್.ಪಿ ತಯಾರಿಕಾ ಘಟಕದವರು ನಿಗದಿಪಡಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.
ಈ ಹಿಂದೆ 2019ರ ಏಪ್ರಿಲ್ 1 ರ ನಂತರ ಖರೀದಿಯಾಗಿರುವ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಆದೇಶ ಹೊರಡಿಸಿದ್ದ ರಾಜ್ಯ ಸಾರಿಗೆ ಇಲಾಖೆ ನವೆಂಬರ್ 17ಕ್ಕೆ ಅಂತಿಮ ಗಡುವು ನೀಡಿತ್ತು.
ಇದನ್ನೂ ಓದಿ: ಹೆಚ್ಎಸ್ಆರ್ಪಿ ಅಳವಡಿಕೆ ಸಮಯ ವಿಸ್ತರಣೆ: ಫೆ. 17ರ ವರೆಗೆ ಅವಕಾಶಕ್ಕೆ ಸಾರಿಗೆ ಇಲಾಖೆ ನಿರ್ಧಾರ