ಚಿಕ್ಕೋಡಿ : ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ರಾಜ್ಯದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮಹಾರಾಷ್ಟ್ರದ ಗಡಿ ಭಾಗದ ಅಥಣಿ, ಕಾಗವಾಡ, ನಿಪ್ಪಾಣಿ ತಾಲೂಕಿನ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ರಾಜ್ಯದಲ್ಲಿ ದಿನನಿತ್ಯ ಕೊರೊನಾ ಪ್ರಕರಣ ಹೆಚ್ಚುತ್ತಿವೆ. ಅಲ್ಲದೇ ಮಹಾರಾಷ್ಟ್ರದಲ್ಲೂ ಕೊರೊನಾ ಮಾಹಾಮಾರಿ ರಣಕೇಕೆ ಹಾಕುತ್ತಿದ್ದು, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಕಳ್ಳಮಾರ್ಗವಾಗಿ ಪ್ರವೇಶಿಸದಂತೆ ಚೆಕ್ಪೋಸ್ಟ್ ನಿರ್ಮಾಣ ಮಾಡಿ ಬಿಗಿ ಪೊಲೀಸ್ ಬಂದೊಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಉಗಾರ-ಕುಡಚಿ ಮಧ್ಯೆ ನಿರ್ಮಿಸಿದ ಚೆಕ್ಪೋಸ್ಟ್ಗೆ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಭೇಟಿ ನೀಡಿ ಪಶೀಲಿಸಿ ಮಾತನಾಡಿ, ಕಾಗವಾಡ ತಾಲೂಕಿನಲ್ಲಿ ಕೊರೊನಾ ತಡೆಗಟ್ಟಲು ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ತಾಲೂಕಿನ ಮಂಗಾವತಿ, ಕಾಗವಾಡ, ಶೇಡಬಾಳ ಮಂಗಸೂಳಿ, ಸಿದ್ದೆವಾಡಿ ಹಾಗೂ ಗಣೇಶವಾಡಿ ಗ್ರಾಮದಲ್ಲಿ ಆರು ಚೆಕ್ಪೋಸ್ಟ್ಗಳು ನಿರ್ಮಿಸಿ ಯಾರೂ ಬರದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದರು.