ಬೆಳಗಾವಿ : ಜಿಲ್ಲೆಯ ಮೂವರಿಗೆ ಕೊರೊನಾ ಸೋಂಕು ತಗಲಿರುವುದು ಜನರ ತಲ್ಲಣಕ್ಕೆ ಕಾರಣವಾಗಿದೆ. ಈ ಮೂವರೂ ಸೋಂಕಿತರು ನವದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿಗೆ ಮರಳಿದ ನಂತರ ಇವ್ರೆಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದಾರೆ ಹಾಗೂ ಸಾಮೂಹಿಕ ನಮಾಜ್ನಲ್ಲಿ ಭಾಗಿಯಾಗಿದ್ದರಿಂದಾಗಿ ಆತಂಕ ಹೆಚ್ಚಿದೆ.
ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿ:
126ನೇ ಸೋಂಕಿನ ವ್ಯಕ್ತಿ ಮಾರ್ಚ್ 4 ರಂದು ಬೆಳಗಾವಿಯಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಪ್ರಯಾಣ ಬೆಳಿಸಿದ್ದ. ಬಳಿಕ ಅದೇ ರೈಲಿನಲ್ಲಿ ಮಾ.19ರಂದು ಬೆಳಗಾವಿಗೆ ಆಗಮಿಸಿದ್ದ. ನಂತರ ಎಂದಿನಂತೆ ಈತ ಕಸಾಯಿಖಾನೆ ಕೆಲಸದಲ್ಲಿ ಭಾಗಿಯಾಗಿದ್ದ. ಕಸಾಯಿಖಾನೆಯಲ್ಲಿ ಸಂಪರ್ಕಕ್ಕೆ ಬಂದವರಿಗೂ ಜಿಲ್ಲಾಡಳಿತ ತೀವ್ರ ಹುಡುಕಾಟ ಆರಂಭಿಸಿದೆ. ಸೋಂಕಿತನ ಜತೆಗೆ ನಾಲ್ಕು ಜನ ಪ್ರಾಥಮಿಕ ಸಂಪರ್ಕ ಹೊಂದಿರುವುದು ದೃಢವಾಗಿದೆ.
127ನೇ ಸೋಂಕು ಪೀಡಿತ ವ್ಯಕ್ತಿ ಮಾರ್ಚ್ 9 ರಂದು ಬೆಳಗಾವಿಯಿಂದ ಸಂಪರ್ಕ ಕ್ರಾಂತಿ ರೈಲಿನ ಮೂಲಕ ದೆಹಲಿಗೆ ಪ್ರಯಾಣ ಮಾಡಿ ಮಾರ್ಚ್ 11 ರಿಂದ ಮಾರ್ಚ್ 18ರವರೆಗೆ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದ. ನಿಜಾಮುದ್ದೀನ್ ಮರ್ಕತ್ ಧಾರ್ಮಿಕ ಮಸೀದಿಯ ಸಭೆಯಲ್ಲೂ ಈತ ಭಾಗಿಯಾದ್ದ. ಮಾರ್ಚ್ 18 ರಂದು ಸಂಪರ್ಕ ಕ್ರಾಂತಿ ರೈಲಿನ ಮೂಲಕ ಬೆಳಗಾವಿಗೆ ವಾಪಸ್ ಆಗಿದ್ದನು. ಕುಟುಂಬದ ಐದು ಜನರ ಸಂಪರ್ಕವನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿ, ಐದು ಜನರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ.
128ನೇ ಸೋಂಕಿತ ವ್ಯಕ್ತಿ ಬೆಳಗಾವಿ ತಾಲೂಕಿನ ಗ್ರಾಮವೊಂದರ ನಿವಾಸಿ. ಫೆ. 12ರಂದು ಬೆಳಗಾವಿಯಿಂದ ದೆಹಲಿಗೆ ರೈಲಿನಲ್ಲಿ ತೆರಳಿದ್ದನು. ದೆಹಲಿಯಿಂದ ಖಾಸಗಿ ವಾಹನದಲ್ಲಿ ತೆರಳಿ ಉತ್ತರಪ್ರದೇಶದ ಚೇಕಡಾ ಗ್ರಾಮಕ್ಕೆ ಪ್ರಯಾಣ ಬೆಳೆಸಿ 36 ದಿನಗಳ ಕಾಲ ಚೇಕಡಾ ಗ್ರಾಮದ ಬಿಲಾಲ್ ಮಸೀದಿಯಲ್ಲಿ ವಾಸವಿದ್ದನು. ಮಾರ್ಚ್ 21ರಂದು ಉತ್ತರಪ್ರದೇಶದಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ವಾಪಸಾಗಿದ್ದ. ಮಾರ್ಚ್ 22ರಂದು ಬೆಳಗಾವಿಗೆ ಆಗಮಿಸಿದ್ದ ಈತ, ಟಾಟಾ ಏಸ್ ವಾಹನದಲ್ಲಿ ಸ್ವಗ್ರಾಮಕ್ಕೆ ಬಂದಿದ್ದನು. ಅಲ್ಲದೇ ಗ್ರಾಮದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ. ಈತನ ಜತೆಗೆ ತಂದೆ-ತಾಯಿ ಸೇರಿ 9 ಜನರಿಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ.