ಬೆಳಗಾವಿ: ಫೇಸ್ಬುಕ್ನಲ್ಲಿ ಮುಂಡರಗಿ ಶ್ರೀನಿಜಗುಣಾನಂದ ಮಹಾಸ್ವಾಮಿಗೆ ಜೀವ ಬೆದರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವ ಆರೋಪಿಗಳನ್ನು ಈ ಕೂಡಲೇ ಪೊಲೀಸರು ಬಂಧಿಸಬೇಕೆಂದು ಒತ್ತಾಯಿಸಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡ ಸಂಘದ ಪದಾಧಿಕಾರಿಗಳು, ಗದಗ ಜಿಲ್ಲೆಯ ಮುಂಡರಗಿ ನಿಷ್ಕಲ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿಯ ಜೀವ ಬೆದರಿಕೆ ಪ್ರಕರಣಗಳ ಕುರಿತು ಈಗಾಗಲೇ ಹಲವು ಬಾರಿ ಪೊಲೀಸರಿಗೆ ದೂರು ನೀಡಲಾಗಿದೆ. ಆದ್ರೆ, ಈವರೆಗೂ ಯಾರ ವಿರುದ್ಧವೂ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಶ್ರೀಗಳ ತೇಜೋವಧೆ ಮಾಡುತ್ತಿರುವ ಆರೋಪಿಗಳನ್ನು ಬಂಧಿಸಿ ಸ್ವಾಮೀಜಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ಅಲ್ಲದೇ, ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಕೆಲವು ಕಿಡಿಗೇಡಿಗಳು ಸಮಾಜದ ಶಾಂತಿ, ಸುವ್ಯವಸ್ಥೆ ಕೆಡಿಸಲು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಲಿಂಗಾಯತ ಧರ್ಮಿಯರ ಶ್ರೇಷ್ಠ ಪ್ರವಚನಕಾರ ಶ್ರೀ ನಿಜಗುಣಪ್ರಭು ಮಹಾಸ್ವಾಮಿ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೊತೆಗೆ ಜೀವ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದಾರೆ. ಇದು ಲಿಂಗಾಯತ ಧಾರ್ಮಿಕ ನಂಬಿಕೆಗೆ ಚ್ಯುತಿ ತಂದಿದ್ದು, ನಾಡಿನ ಶಾಂತಿ ಕದಡಲು ಕುಮ್ಮುಕ್ಕು ನೀಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.