ಬೆಳಗಾವಿ: ಮಹಾಮಾರಿ ಕೊರೊನಾ ಅಟ್ಟಹಾಸ ಜಿಲ್ಲೆಯಲ್ಲಿ ದಿನೇ- ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆ, ಇಲ್ಲೊಂದು ಗ್ರಾಮದಲ್ಲಿ ಜನರು ತಮ್ಮ ಗ್ರಾಮಕ್ಕೆ ಯಾರೂ ಕೂಡಾ ಬಾರದಂತೆ ಸ್ವಯಂ ನಿರ್ಬಂಧ ಹೇರಿಕೊಂಡಿದ್ದು, ಸ್ವತಃ ಚೆಕ್ ಪೋಸ್ಟ್ ಹಾಕಿಕೊಂಡು ಗ್ರಾಮದ ರಕ್ಷಣೆಗೆ ನಿಂತಿದ್ದಾರೆ.
ಹೌದು, ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಯಾರೊಬ್ಬರೂ ಬರದಂತೆ ಚೆಕ್ಪೋಸ್ಟ್ ನಿರ್ಮಿಸಿಕೊಂಡು ಗ್ರಾಮದ ಜನರ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಹಲವೆಡೆ ಲಾಕ್ಡೌನ್ ಉಲ್ಲಂಘನೆಯಾಗುತ್ತಿದ್ದು, ನಯಾನಗರ ಗ್ರಾಮದಲ್ಲಿ ಮಾತ್ರ ಲಾಕ್ಡೌನ್ ಆದೇಶ ಆದಾಗಿನಿಂದಲೂ ಇಂದಿನವರೆಗೂ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡುವ ಮೂಲಕ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ.
ಗ್ರಾಮಕ್ಕೆ ಸ್ವಯಂ ನಿರ್ಬಂಧ: ಇನ್ನು ಈ ಗ್ರಾಮದಿಂದ ಹೊರ ಮತ್ತು ಒಳಪ್ರವೇಶ ಮಾಡುವ ಎಲ್ಲಾ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಿರುವ ಇವರು ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಒಂದು ರಸ್ತೆಯನ್ನು ಇಟ್ಟುಕೊಂಡು ಅದಕ್ಕೆ ಚೆಕ್ಪೋಸ್ಟ್ ಹಾಕಿ, ಆ ರಸ್ತೆ ಮೂಲಕವೇ ಜನರು ಸಂಚರಿಸುವಂತೆ ಮಾಡಿದ್ದಾರೆ. ಅಗತ್ಯ ವಸ್ತು ಖರೀದಿಗೆ ಅವಕಾಶ ಇದ್ದು, ಇದಕ್ಕಾಗಿಯೇ ರಿಜಿಸ್ಟರ್ ಪುಸ್ತಕ ಇಟ್ಟುಕೊಂಡಿರುವ ಇವರು ಗ್ರಾಮದ ಒಳಗೆ ಹೋಗುವ ವಾಹನಗಳು ಮತ್ತು ಬೈಕ್ಗಳ ಸಂಖ್ಯೆ, ಹೆಸರು, ಅಗತ್ಯ ಕಾರಣ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಈ ಪುಸ್ತಕದಲ್ಲಿ ನಮೂದಿಸಿಕೊಂಡು ನಂತರವೇ ಅವಕಾಶ ನೀಡಲಾಗುತ್ತದೆ.
ಆದ್ರೆ, ಬೇರೆ ಗ್ರಾಮದ ಜನರಿಗೆ ಗ್ರಾಮದ ಒಳಗೆ ಯಾವುದೇ ಕಾರಣಕ್ಕೂ ಪ್ರವೇಶಿಸಲು ಅವಕಾಶ ನೀಡದೆ ತಮ್ಮ ಗ್ರಾಮವನನ್ನು ಸ್ವಯಂ ಸೀಲ್ಡೌನ್ ಮಾಡಿಕೊಂಡಿದ್ದಾರೆ. ಆರೋಗ್ಯ ಅಧಿಕಾರಿಗಳು ಪ್ರತಿದಿನ ಗ್ರಾಮದ ಮನೆಗಳಿಗೆ ತೆರಳಿ ಆರೋಗ್ಯವನ್ನು ವಿಚಾರಿಸುತ್ತಾರೆ. ಗ್ರಾಮದಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್ಗಳನ್ನು ಶ್ರೀ ಅಭಿನವ ಸಿದ್ದಲಿಂಗ ಸ್ವಾಮಿಗಳು ವಿತರಿಸಿದ್ದಾರೆ. ಮಾಸ್ಕ್ ಹಾಕಿಕೊಳ್ಳದಿರುವವರಿಗೆ ದಂಡವನ್ನು ವಿಧಿಸುತ್ತಾರೆ. ಇದಕ್ಕೆ ಪೊಲೀಸರ ಭಯವಾಗಲಿ, ಅಧಿಕಾರಿಗಳ ಭಯವಾಗಲಿ ಇಲ್ಲ. ಎಲ್ಲವನ್ನೂ ಸರ್ಕಾರವೇ ಮಾಡೋದಿಲ್ಲ ಎಂಬ ಸಣ್ಣ ಪರಿಜ್ಞಾನ ಹಾಗೂ ಜಾಗೃತಿಯೊಂದಿಗೆ ಸ್ವಯಂ ರಕ್ಷಣೆಗೆ ಜನರು ಮುಂದಾಗಿದ್ದಾರೆ.
ಇನ್ನು ಈ ಗ್ರಾಮಕ್ಕೆ ಯಾವ ಪೊಲೀಸರ ಸಹಾಯವಾಗಲಿ, ಜನಪ್ರತಿನಿಧಿಗಳ ಸಹಾಯ ಇಲ್ಲದೇ ಸ್ವತಃ ಗ್ರಾಮಸ್ಥರೇ ದಿನದ 24 ಗಂಟೆಗಳ ಕಾಲ ಪಾಳೆಯ ಅವಧಿಯಂತೆ ಗ್ರಾಮವನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಗ್ರಾಮಸ್ಥರಿಗೆ ಬೆನ್ನೆಲುಬಾಗಿ ಶ್ರೀ ಜಗದ್ಗುರು ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ನಿಂತಿದ್ದು, ಶ್ರೀಗಳ ಮಾರ್ಗದರ್ಶನದಲ್ಲಿ ಗ್ರಾಮಸ್ಥರು ಮುನ್ನೆಡೆಯುತ್ತಿದ್ದಾರೆ.