ಬೆಳಗಾವಿ: 2019-2020ನೇ ಸಾಲಿನಲ್ಲಿ ಮಳೆಯಿಂದ ಹಾನಿಯಾಗಿದ್ದ 835 ಕಾಮಗಾರಿಗಳನ್ನು 202 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗಿತ್ತು. ಅದರಲ್ಲಿ ಬಹುತೇಕ ಕಾಮಗಾರಿಗಳು ಮುಕ್ತಾಯವಾಗಿದ್ದು, ಇನ್ನು ಕೇವಲ 22 ಕಾಮಗಾರಿಗಳು ಬಾಕಿಯಿವೆ. ಅವುಗಳು ತಿಂಗಳ ಅವಧಿಯಲ್ಲಿಯೇ ಮುಗಿಯಲ್ಲಿವೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಹೇಳಿದರು.
ನಗರದ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2020-21ಸಾಲಿನಲ್ಲಿ 2142 ಕಿ.ಮಿ.ರಸ್ತೆ ಹಾಗೂ 425 ಸಿಡಿ ವರ್ಕ್ ಮತ್ತು ಸೇತುವೆಗಳು ಹಾಳಾಗಿವೆ. ಈ ವರ್ಷ ಸುಮಾರು 1600 ಕೋಟಿಯಷ್ಟು ಹಾನಿಯಾಗಿದೆ ಎಂದರು. ರಸ್ತೆಗಳ ತಾತ್ಕಾಲಿಕ ದುರಸ್ಥಿಗೆ 256 ಕೋಟಿ ರೂಪಾಯಿ ಬೇಕಾಗಿದ್ದು. ಇದರಲ್ಲಿ ನಿನ್ನೆ 175 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ. ಸೆಪ್ಟೆಂಬರ್ 8ರೊಳಗೆ ಟೆಂಡರ್ ಕರೆದು ಸೆ. 20/21ರೊಳಗೆ ಕಾಮಗಾರಿ ಆರಂಭಿಸುವಂತೆ ಮುಖ್ಯ ಎಂಜಿನಿಯರ್ಗೆ ಸೂಚನೆ ನೀಡಿದ್ದೇನೆ. ಅದೇ ರೀತಿ ಧಾರವಾಡ ವೃತ್ತದ ಅಧಿಕಾರಿಗಳಿಗೂ ಸೆ.7-8ರೊಳಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇನ್ನು ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಇಡೀ ರಾಜ್ಯದಲ್ಲಿ 9,603 ಕಿ.ಮಿ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿದ್ದೇವೆ. ಅದೇ ರೀತಿ 15,509 ಕಿ.ಮಿ. ಹಳ್ಳಿ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಪಂಚಾಯತರಾಜ್ ಇಲಾಖೆಯ ರಸ್ತೆಗಳನ್ನು ನಮ್ಮ ಇಲಾಖೆಗೆ ಒಳಪಡಿಸಿಕೊಂಡು ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಸುವರ್ಣಸೌಧ ಹಸಿರು ಸೌಧ ಆಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 45 ದಿನ ನಿರಂತರವಾಗಿ ಮಳೆ ಆಗಿರುವುದರಿಂದ ಕಟ್ಟಡ ಹಸಿರಾಗಿದೆ. ಮಳೆ ನಿಂತ ಮೇಲೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ. ಬೆಂಗಳೂರಿನ ವಿಧಾನಸೌಧದಲ್ಲಿ ಸ್ವಚ್ಛತೆ ಇರುತ್ತದೆ. ಆದ್ರೆ, ಸುವರ್ಣಸೌಧದಲ್ಲಿ ಮಾತ್ರ ಸ್ವಚ್ಛತೆಯಲ್ಲಿ ಬೇಜವಾಬ್ದಾರಿ ಯಾಕೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಹಾಗೇನಿಲ್ಲ ಮಳೆ ನಿಂತ ಬಳಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಹಾಗೂ ಡ್ರಗ್ ದಂಧೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿಯವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಸತ್ಯಕ್ಕೆ ದೂರವಾದ ಹೇಳಿಕೆಯಾಗಿದ್ದು, ರಾಜಕೀಯ ಪ್ರೇರಿತವಾದ ಆರೋಪವಾಗಿದೆ ಎಂದರು. ಡ್ರಗ್ ಮಾಫಿಯಾ ಸಂಬಂಧ ತನಿಖೆ ನಡೆಯುತ್ತಿದೆ. ಕಾಯಬೇಕಷ್ಟೆ ತನಿಖಾ ಹಂತದಲ್ಲಿ ಯಾವುದೇ ವಿಷಯವನ್ನು ಬಹಿರಂಗ ಮಾಡಲು ಬರುವುದಿಲ್ಲ. ಅದಕ್ಕಾಗಿ ಆರೋಪದ ಆಧಾರದ ಮೇಲೆ ತನಿಖೆ ನಡೆಯುತ್ತಿದೆ. ಪ್ರಕರಣದ ಸತ್ಯಾಸತ್ಯತೆ ಕುರಿತು ತನಿಖೆಯಾದ ಆದ ಬಳಿಕ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.