ಬೆಳಗಾವಿ:14ನೇ ಹಣಕಾಸು ಯೋಜನೆಯಲ್ಲಿ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ನೀಡಲಾಗಿದೆ. ಹೀಗಾಗಿ ಪ್ರವಾಹದಂತ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗಬೇಕಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ 14ನೇ ಹಣಕಾಸು ಆಯೋಗದಲ್ಲಿ ರಾಜ್ಯಗಳಿಗೆ ಹೆಚ್ಚಿನ ಅನುದಾನ ದೊರೆಯುವಂತೆ ಮಾಡಲಾಗಿದೆ. ಅತಿವೃಷ್ಠಿಯ ಸಂದರ್ಭಗಳಲ್ಲಿ ರಾಜ್ಯ ಕೇಂದ್ರದ ಕದ ತಟ್ಟಬಾರದು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ಮೋದಿ ಕೈಗೊಂಡಿದ್ದರು. ಹೀಗಾಗಿ ಪರಿಹಾರದ ಹಣಕ್ಕಾಗಿ ಮೊದಲಿನಂತೆ ಕೇಂದ್ರದ ಮೊರೆ ಹೋಗುವ ಅವಶ್ಯಕತೆ ಈಗಿಲ್ಲ ಎಂದರು.
ಆರ್ಥಿಕವಾಗಿ ಸದೃಢವಾಗಿರುವ ರಾಜ್ಯ ಸರ್ಕಾರವೇ ನೆರೆ ಪರಿಹಾರ ಘೋಷಿಸಿದೆ. ಪ್ರವಾಹ ಪೀಡಿತ ಉತ್ತರ ಕರ್ನಾಟಕ ಭಾಗಕ್ಕೆ ಅಗತ್ಯ ಪರಿಹಾರ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈ ವಯಸ್ಸಿನಲ್ಲೂ ಸಿ ಎಂ ಬಿ.ಎಸ್.ವೈ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದ ಸಂದರ್ಭದಲ್ಲಿ ರಕ್ಷಣಾ ಕಾರ್ಯಕ್ಕೆ ಬಂದಿದ್ದ ಎನ್.ಡಿ.ಆರ್.ಎಫ್, ಸೇನೆ ಕೇಂದ್ರ ಸರ್ಕಾರಕ್ಕೆ ಸೇರಿವೆ. ವೈಮಾನಿಕ ಸಮೀಕ್ಷೆ ನಡೆಸಿದ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಕೂಡ ಕೇಂದ್ರ ಸರ್ಕಾರದ ಪ್ರತಿನಿಧಿಗಳೆ. ಪ್ರವಾಹಕ್ಕೆ ಕೇಂದ್ರ ಸ್ಪಂದಿಸುತ್ತಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತೇಜಸ್ವಿ ಈ ರೀತಿ ತಿರುಗೇಟು ನೀಡಿದರು.