ಬೆಳಗಾವಿ: ಕೊರೊನಾ ಎರಡನೆ ಅಲೆಯನ್ನು ಸರಿಯಾಗಿ ಅಂದಾಜಿಸದೆ ರಾಜ್ಯ ಸರ್ಕಾರ ಯೋಜಿತವಾಗಿ ಸಿದ್ಧತೆ ಮಾಡಿಕೊಳ್ಳಲಿಲ್ಲ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಅಭಿಪ್ರಾಯಪಟ್ಟರು.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಖಾನಾಪುರ ತಾಲೂಕಿನ ಅಂಬೇವಾಡಿ ಗ್ರಾಮವೊಂದರಲ್ಲಿ 40 ಕೊರೊನಾ ಕೇಸ್ ಪತ್ತೆಯಾಗಿವೆ. ಹೀಗಾಗಿ ಪೂರ್ತಿ ಊರು ಲಾಕ್‌ಡೌನ್ ಮಾಡಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಯಾರೂ ಸಹ ಊರು ಒಳಗೆ-ಹೊರಗೆ ಹೋಗದಂತೆ ನೋಡಿಕೊಳ್ಳಲು ಎಚ್ಚರಿಸಿದ್ದೇನೆ ಎಂದರು.
ಕೋವಿಡ್ ಮೂರನೆ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಮುಂದಾದರು ಸರ್ಕಾರ ಎಚ್ಚೆತುಕೊಳ್ಳಬೇಕಿದೆ. ಸರಿಯಾದ ಸಿದ್ಧತೆ ಮಾಡಿಕೊಳ್ಳದೆ ಇರುವುದು ಕೋವಿಡ್ ಎರಡನೇ ಅಲೆಯಲ್ಲಿ ಸಾವು-ನೋವು ಹೆಚ್ಚಾಗಲು ಕಾರಣವಾಯಿತು. ಸೆಪ್ಟೆಂಬರ್- ಅಕ್ಟೋಬರ್ನಲ್ಲಿ ಸಿದ್ಧತೆ ಮಾಡಿಕೊಂಡ ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ಈಗ ಆಗಿದ್ದು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಸರ್ಕಾರ ತಯಾರಿ ಮಾಡಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಕ್ಸಿಜನ್, ರೆಮ್ಡೆಸಿವಿರ್, ಬೆಡ್ಗಳ ಕೊರತೆ ತುಂಬಾ ಇದೆ. ಹೀಗಾಗಿ ಹಳ್ಳಿಗಳಲ್ಲಿ ಜನರು ಆಸ್ಪತ್ರೆಗೆ ಹೋಗಲು ಹೆದರುತ್ತಿದ್ದಾರೆ. ಎಲ್ಲಿ ಆಸ್ಪತ್ರೆಗೆ ಹೋದ ಮೇಲೆ ಜೀವಂತವಾಗಿ ಬರುವ ಭರವಸೆ ಅವರಲ್ಲಿ ಈಗಿಲ್ಲ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ಔಷಧಿ ಕೊರತೆ ಕಾಣುತ್ತಿದೆ. ಹೀಗಾಗಿ ಹಳ್ಳಿಯ ಜನ ಶೇ 40ರಷ್ಟು ಸ್ಯಾಚ್ಯುರೇಷನ್ ಆದ ಮೇಲೆ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದಲೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಕಳೆದೆರಡು ದಿನಗಳ ಹಿಂದೆ ನಂದಗಡ ಆಸ್ಪತ್ರೆ ಬಳಿ ನನ್ನ ಎದುರೆ ಓರ್ವ ಮೃತಪಟ್ಟ. ದಯವಿಟ್ಟು ವೈದ್ಯರ ಸಲಹೆ ಪಡೆದು ಹೋಮ್ ಐಸೊಲೇಷನ್‌ಗೆ ಸೂಚಿಸಿದರೇ ಮಾತ್ರ ಮನೆಯಲ್ಲಿ ಇರಬೇಕು. ಇಲ್ಲವಾದರೆ ಆಸ್ಪತ್ರೆಗೆ ದಾಖಲಾಗಬೇಕು ಎಂದರು.
ಕೋವಿಡ್ ವೇಳೆ ಚುನಾವಣೆಯಲ್ಲಿ ಸಿಎಂ ಮಾತ್ರವಲ್ಲದೇ ಪ್ರಧಾನಿಯೂ ಪ್ರಚಾರ ಮಾಡಿದ್ದರು. ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೂ ಕೇಳಿದೆ, ಏನ್ ತೀರ್ಮಾನ ಬರುತ್ತೆ ನೋಡೋಣ. ಓರ್ವ ವೈದ್ಯೆಯಾಗಿ, ಶಾಸಕಿಯಾಗಿ ನಾನು ಸರ್ಕಾರಕ್ಕೆ ಸಲಹೆ ಕೊಡುತ್ತೇನೆ. ಇಲ್ಲಿಯವರೆಗೂ ಏನು ಆಗಿದೆ ಅದು ಮುಗಿದಿದೆ. ಮುಂದೆ ನಾವು ನಿಯಂತ್ರಣ ಮಾಡಬೇಕು. ಸಿಎಂ ಮತ್ತು ಪ್ರಧಾನಿಗೆ ಸದ್ಯದ ಪರಿಸ್ಥಿತಿ ಬಗ್ಗೆ ಅರ್ಥ ಆಗುತ್ತಿಲ್ಲ. ತಪ್ಪಾಯ್ತು ಅಂದ್ರೆ ಜನ ಕ್ಷಮಿಸುವ ಮನಸ್ಥಿತಿಯಲ್ಲಿ ಇಲ್ಲ. ನೀವು ಜನರ ಸಹಾಯಕ್ಕೆ ಮುಂದೆ ಬಂದು ಸಾಂಕ್ರಾಮಿಕ ರೋಗ ಎದುರಿಸಲು ಇನ್ನಷ್ಟು ಸಜ್ಜಾಗಬೇಕು ಎಂದು ನಿಂಬಾಳ್ಕರ್ ಮನವಿ ಮಾಡಿದರು.