ಬೆಳಗಾವಿ: ಬೈಕ್ಗೆ ಅಡ್ಡಗಟ್ಟಿ ಹೆದರಿಸಿ, ಕಣ್ಣಿಗೆ ಖಾರದಪುಡಿ ಎರಚಿ ಮೊಬೈಲ್, ಹಣ, ಚಿನ್ನದ ಸರಗಳನ್ನು ಎಗರಿಸುತ್ತಿದ್ದ ಧಾರವಾಡ ಮೂಲದ ಮೂವರು ಆರೋಪಿಗಳನ್ನು ಕಿತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದ ಉಮೇಶ ಖಡೋಜಿ, ಪೀರಸಾಬ್ ಮುಲ್ಲಾ, ಸನಾವುಲ್ಲಾ ಹೋಳಿ ಬಂಧಿತ ಆರೋಪಿಗಳು. ಬಂಧಿತರಿಂದ 50 ಸಾವಿರ ಮೌಲ್ಯದ ಮೊಬೈಲ್, 42 ಸಾವಿರ ಮೌಲ್ಯದ ಚಿನ್ನದ ಸರ, 60 ಸಾವಿರ ಮೌಲ್ಯದ 2 ಬೈಕ್ ಜಪ್ತಿ ಮಾಡಲಾಗಿದೆ.
ಮಾರ್ಚ್ 11 ರಂದು ಬಹಿರ್ದೆಸೆಗೆ ತೆರಳಿದ್ದ ಹುಬ್ಬಳ್ಳಿಯ ಬಾಳೇಶ ಸುಣಗಾರರ ಕಣ್ಣಿಗೆ ಖಾರದಪುಡಿ ಎರಚಿ ಆತನ ಬಳಿಯಿದ್ದ ಮೊಬೈಲ್ ಅನ್ನು ದುಷ್ಕರ್ಮಿಗಳು ಎಗರಿಸಿದ್ದರು. ಶಿವಾಜಿ ಜಯಂತಿಯಂದು ಕಿತ್ತೂರು-ಬಿಡಿ ರಸ್ತೆಯ ಬಸರಕೋಡ ಗ್ರಾಮದ ಬಳಿ ಇಬ್ಬರು ಬೈಕ್ ಸವಾರರನ್ನು ಅಡ್ಡಗಟ್ಟಿ ಮೊಬೈಲ್, ಚಿನ್ನದ ಸರವನ್ನು ಇದೇ ದುಷ್ಕರ್ಮಿಗಳ ತಂಡ ಡಕಾಯಿತಿ ಮಾಡಿತ್ತು.
ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಬೈಕ್ ಸವಾರರನ್ನು ತಡೆದು ಹೆದರಿಸಿ ಮೊಬೈಲ್ ಎಗರಿಸಿ ಪರಾರಿಯಾಗಿದ್ದರು.
ಈ ಎಲ್ಲಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಕಿತ್ತೂರು ಠಾಣೆಯ ಸಿಪಿಐ ಶ್ರೀಕಾಂತ್ ತೋಟಗಿ, ಪಿಎಸ್ಐ ಕುಮಾರ ಹಿತ್ತಲಮನಿ ಹಾಗೂ ಪ್ರೊಬೇಷನರಿ ಪಿಎಸ್ಐ ಆನಂದ ಕ್ಯಾರಕಟ್ಟಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.