ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೇರ್ಲಿ ಗ್ರಾಮದ ಯೋಧ ಚೇತನ ಪಾಟೀಲ ಜಮ್ಮು-ಕಾಶ್ಮೀರದ ಸೋಫಿಯಾ ಜಿಲ್ಲೆಯ ಔರಾ ಗ್ರಾಮದ ಡೊಗ್ರಾ ರೆಜಿಮೆಂಟ್‌ನ 62ನೇ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಬುಧುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಅವರ ಪಾರ್ಥಿವ ಶರೀರವನ್ನು ಸ್ವ ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಚೇತನ ಪಾಟೀಲ ಯೋಧನ ಪಾರ್ಥಿವ ಶರೀರವನ್ನು ದೆಹಲಿ ಮಾರ್ಗವಾಗಿ ವಿಮಾನದ ಮೂಲಕ ಪುಣೆಗೆ ರವಾನಿಸಲಾಯಿತು. ನಂತರ ಪುಣೆಯಿಂದ ರಸ್ತೆ ಮಾರ್ಗವಾಗಿ ಇಂದು ಸ್ವಗ್ರಾಮ ನೇರ್ಲಿಗೆ ಆಗಮಿಸಿದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಒಂದು ತಿಂಗಳ ಹಿಂದೆ ನೂತನ ಗೃಹ ಪ್ರವೇಶ ಮಾಡಿ ಯರಗಟ್ಟಿ ಗ್ರಾಮದ ಹುಡಗಿ ಜೊತೆ ಮದುವೆ ನಿಶ್ಚಿತಾರ್ಥ ಕೂಡ ನಡೆದಿತ್ತು. ಜನವರಿಯಲ್ಲಿ ಮದುವೆ ಕೂಡ ನಡೆಯಬೇಕಾಗಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.
ತಂದೆ-ತಾಯಿಗಳನ್ನು ಕಳೆದುಕೊಂಡ ಯೋಧ ತನ್ನ ಅತ್ತೆ ಮನೆಯಾದ ಹೆಬ್ಬಾಳದಲ್ಲಿ ವಿದ್ಯಾಭ್ಯಾಸ ಮಾಡಿ ಸೇನೆಗೆ ಸೇರಿಕೊಂಡಿದ್ದ. ನೇರ್ಲಿ ಗ್ರಾಮದಲ್ಲಿ ಮೆರವಣಿಗೆ ಮೂಲಕ ಶೃಂಗಾರಗೊಂಡ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.