ಬೈಲಹೊಂಗಲ: ತಾಲೂಕಿನ ಹಿರೇಬಾಗೆವಾಡಿ ಗ್ರಾಮದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಪೊಲೀಸರ ಕಣ್ತಪ್ಪಿಸಿ ನಡೆದುಕೊಂಡು ತನ್ನೂರು ಸೇರಿದ್ದು, ಈ ವಿಷಯ ತಿಳಿದ ಗ್ರಾಮಸ್ಥರು ಆತನನ್ನು ಕ್ವಾರಂಟೈನ್ಗೆ ಒಳಪಡಿಸುವಂತೆ ಆಗ್ರಹಿಸುತ್ತಿದ್ದಾರೆ.
ವ್ಯಕ್ತಿ ಮೂಲತಃ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದವರು. ಈತ ಕಳೆದೆರಡು ವರ್ಷಗಳ ಹಿಂದೆಯೇ ಕುಟುಂಬದವರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವ ಹಿರೇಬಾಗೆವಾಡಿ ಗ್ರಾಮದಲ್ಲಿನ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇನ್ನು ಇಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದಾಗಿ ಜಿಲ್ಲಾಡಳಿತ ಈ ಗ್ರಾಮವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದರಿಂದ ಸಂಪೂರ್ಣವಾಗಿ ಸೀಲ್ ಡೌನ್ಗೆ ಒಳಪಟ್ಟಿದೆ.
ಇನ್ನು ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಎಲ್ಲವೂ ಬಂದ್ ಆಗಿರುವ ಕಾರಣ ಹಲವು ದಿನಗಳಿಂದ ಊಟವಿಲ್ಲದೇ ಪರದಾಡಿದ್ದಾರೆ ಎನ್ನಲಾಗುತ್ತಿದ್ದು, ಹಸಿವಿನಿಂದ ಆತ ಹಿರೇಬಾಗೇವಾಡಿ ಗ್ರಾಮದಲ್ಲಿನ ಪೊಲೀಸರ ಕಣ್ತಪ್ಪಿಸಿಕೊಂಡು ಬೈಲಹೊಂಗಲದವರೆಗೆ ಕಾಲ್ನಡಿಗೆ ಮುಖಾಂತರ ಬಂದಿದ್ದಾರೆ. ಅಲ್ಲಿಂದ ಅಪರಿಚಿತರ ಬೈಕ್ ಮೂಲಕ ತನ್ನೂರು ದೊಡವಾಡಕ್ಕೆ ಬಂದು ತಲುಪಿದ್ದಾರೆ. ಆದರೆ ಹಿರೇಬಾಗೇವಾಡಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಗ್ರಾಮಸ್ಥರು ಈತನಿಗೆ ಗ್ರಾಮದ ಒಳಪ್ರವೇಶ ಮಾಡದಂತೆ ತಡೆದಿದ್ದಾರೆ.
ಈ ಕುರಿತು ಆರೋಗ್ಯ ಅಧಿಕಾರಿಗಳ ಮತ್ತು ಸ್ಥಳೀಯ ಪಿಡಿಒಗಳ ಗಮನಕ್ಕೆ ತಂದಿದ್ದಾರೆ. ಆದರೆ, ಯಾರೂ ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಇನ್ನು ಕುಟುಂಬಸ್ಥರು ಕೂಡ ಇದಕ್ಕೆ ವಿರೋಧ ಮಾಡದೇ ಕ್ವಾರಂಟೈನ್ ಮಾಡಿ ಇದಾದ ನಂತರ ಅವರನ್ನು ನಮ್ಮನೆಗೆ ಕಳುಹಿಸಿಕೊಡಿ ಎಂದಿದ್ದಾರೆ.